ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ (Manju Pavagada) ಅವರು ಹಸೆಮಣೆ ಏರಲು ಸಿದ್ಧತೆ ನಡೆಸಿದ್ದು, ಕೆಲ ದಿನಗಳ ಹಿಂದೆಯಷ್ಟೇ ನಂದಿನಿ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತುಮಕೂರಿನ ಪಾವಗಡದ ಮಂಜು ಅವರ ನಿವಾಸದಲ್ಲಿಯೇ ನಿಶ್ಚಿತಾರ್ಥ ಸರಳವಾಗಿ ನಡೆದಿದೆ. ಎರಡೂ ಕುಟುಂಬಗಳ ಆಪ್ತರು ಮಾತ್ರ ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ಇದೇ ವರ್ಷದ ನವೆಂಬರ್ 13 ಮತ್ತು 14 ರಂದು ಮಂಜು ಪಾವಗಡ ಹಾಗೂ ನಂದಿನಿಯವರ ವಿವಾಹ ಶುಭಕಾರ್ಯವು ಪಾವಗಡದಲ್ಲಿಯೇ ನಡೆಯಲಿದೆ ಎಂದು ತಿಳಿದುಬಂದಿದೆ.
ಮಂಜು ಕೈ ಹಿಡಿಯಲಿರುವ ನಂದಿನಿಯವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಅರೇಂಜ್ಡ್ ಮ್ಯಾರೇಜ್ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಜು (Manju Pavagada) ಅವರು ಇತ್ತೀಚೆಗಷ್ಟೇ ಪಾವಗಡದಲ್ಲಿ ನೂತನ ಮನೆ ಕಟ್ಟಿಸಿ, ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಮಂಜು ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಇನ್ನು, ಮಂಜು ಪಾವಗಡ ಅವರು ಬಿಗ್ ಬಾಸ್ ಸೀಸನ್ 8 ರ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಹಾಗೆಯೇ, ಸೀಸನ್ನ ಪದಕವನ್ನೂ ಮುಡಿಗೇರಿಸಿಕೊಂಡಿದ್ದರು. ಆ ಬೆನ್ನಲ್ಲೇ, ಗಿಚ್ಚಿ ಗಿಲಿಗಲಿ ಮತ್ತು ಮಜಾಭಾರತ ರಿಯಾಲಿಟಿ ಶೋಗಳ ಮೂಲಕ ಹೆಸರು ಸಂಪಾದಿಸಿದರು.
ʼಅಂತರಪಟʼ ಮತ್ತು ʼಭಾಗ್ಯಲಕ್ಷ್ಮೀʼ ಧಾರಾವಾಹಿಗಳಲ್ಲಿ ಮಂಜು (Manju Pavagada) ನಟಿಸುತ್ತಿದ್ದಾರೆ. ಕನ್ನಡದ ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ. ಇದರಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಿದ್ದರೆ, ಮತ್ತಷ್ಟು ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿವೆ.