ಕನ್ನಡದ ಬಿಗ್ ಬಾಸ್ ಸೀಸನ್ (Bigg Boss) ಗಳಲ್ಲಿಯೇ ಮೊಟ್ಟಮೊದಲ ಬಾರಿಗೆ ಕಿಚ್ಚ ಸುದೀಪ್ (Kiccha Sudeep) ಅವರ ಬದಲಾಗಿ ಮತ್ತೊಬ್ಬ ನಿರೂಪಕ ವಾರಾಂತ್ಯದ ಶೋ ನಡೆಸಿಕೊಡಲು ಬರುತ್ತಿದ್ದಾರೆ.
ಹೌದು, ಕಳೆದ ವಾರದವಷ್ಟೇ ಕಿಚ್ಚ ಸುದೀಪ್ ಅವರ ತಾಯಿ ಧೈವಾಧೀನರಾಗಿದ್ದಾರೆ. ಇನ್ನು ತಾಯಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ಕಿಚ್ಚ ಸುದೀಪ್ ಈ ವಾರಾಂತ್ಯದ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ. ಮನಸ್ಸಿನಲ್ಲಿ ಸಾಕಷ್ಟು ದುಃಖವನ್ನಿಟ್ಟುಕೊಂಡು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಹೇಗೆ ಮಾತನಾಡುವುದು ಎಂಬ ಭಾವನೆ ಅವರಲ್ಲಿ ಕಾಡಿರಬಹುದು. ಅಲ್ಲದೇ, ಅವರ ತಾಯಿ ಅಂತಿಮ ಕಾರ್ಯಗಳು ಇನ್ನೂ ಬಾಕಿಯಿವೆ. ಈ ಸಮಯದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಬೇಡ ಎಂದು ಅವರು ನಿರ್ಧರಿಸಿರಬಹುದು.
ಕಿಚ್ಚ ಸುದೀಪ್ (Kiccha Sudeep) ಅವರು ಲಭ್ಯರಿಲ್ಲದ ಕಾರಣ ಪ್ರಪ್ರಥಮ ಬಾರಿಗೆ ವಾರಾಂತ್ಯದ ಅತಿಥಿ ನಿರೂಪಕರನ್ನು ಕಲರ್ಸ್ ಕನ್ನಡ ವಾಹಿನಿ ಆರಿಸಿಕೊಂಡಿದೆ. 11ನೇ ಸೀಸನ್ (Bigg Boss) ನಲ್ಲಿ ಹಲವು ಬದಲಾವಣೆಗಳು ಮೇಲಿಂದ ಮೇಲೆ ಆಗುತ್ತಲೇ ಇವೆ. ಈಗಾಗಲೇ ನಟ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಹೇಳಿದ್ದಾರೆ.
ಇನ್ನು, ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಗೆ ಸಂಕಷ್ಟದ ಸಮಸ್ಯೆ ತಲೆದೋರಿದೆ. ಅನಾರೋಗ್ಯ ಸೇರಿದಂತೆ ಇನ್ನಿತರೆ ಕಾರಣಗಳಿದ್ದಾಗ್ಯೂ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿ ಕರ್ತವ್ಯದ ಬದ್ಧತೆ ಮರೆದಿದ್ದರು. ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಮಾತು ಎಲ್ಲರ ಜೀವನದಲ್ಲೂ ಸತ್ಯ. ಅಂತಹ ದೇವರನ್ನೇ ಕಳೆದುಕೊಂಡಿರುವ ಸ್ಥಿತಿಯಲ್ಲಿ ಸುದೀಪ್ ಇದ್ದಾರೆ.
ಅತಿಥಿ ನಿರೂಪಕರು :
ಕಿಚ್ಚ ಸುದೀಪ್ ಅವರಿಗೆ ಈ ವಾರದ ನಿರೂಪಣೆ ಮಾಡಲು ಸಾಧ್ಯವವಾಗುವುದಿಲ್ಲ ಎನ್ನುವುದನ್ನು ಅರಿತಿರುವ ಬಿಗ್ ಬಾಸ್ (Bigg Boss) ತಂಡ ನೂತನ ಇಬ್ಬರು ನಿರೂಪಕರನ್ನು ಆಯ್ಕೆಮಾಡಿಕೊಂಡಿದೆ. ಶನಿವಾರದ ಎಪಿಸೋಡ್ ಅನ್ನು ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ನಡೆಸಿಕೊಡಲಿದ್ದಾರೆ. ಹಾಗೆಯೇ, ಭಾನುವಾರದ ಎಪಿಸೋಡ್ ಅನ್ನು ನಿರೂಪಕ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
ಕಿಚ್ಚ ಸುದೀಪ್ (Kiccha Sudeep) ಅವರ ಜಾಗಕ್ಕೆ ಈ ಇಬ್ಬರೂ ಬಂದು ನಿರೂಪನೆ ಮಾಡಲಿದ್ದಾರೆ. ಈ ವಾರದ ನಿರೂಪಣೆ ಪ್ರಥಮ ಬಾರಿಗೆ ಕಿಚ್ಚನ ಹೊರತಾದ ವ್ಯಕ್ತಿಗಳಿರುವುದರಿಂದ ಕಾರ್ಯಕ್ರಮ ಹೇಗೆ ನಡೆಯಲಿದೆ ಎನ್ನುವ ಕುತೂಹಲ ರಾಜ್ಯದ ಜನರಲ್ಲಿದೆ.
ಈಗಾಗಲೇ ನಿರ್ದೇಶಕ ಯೋಗರಾಜ್ ಭಟ್ ಅವರು ಮನೆಯ ಒಳಗಡೆ ಹೋಗಿ ಅಭ್ಯರ್ಥಿಗಳಿಗೆ ಚಾಲನಾ ಶಕ್ತಿಯ ಕೀ ನೀಡುತ್ತಿದ್ದಾರೆ ಎನ್ನುವ ಅರ್ಥದಲ್ಲಿನ ಪ್ರೋಮೋವನ್ನು ವಾಹಿನಿ ಬಿಡುಗಡೆ ಮಾಡಿದೆ. ಅಂತಿಮವಾಗಿ ಕಾರ್ಯಕ್ರಮ ಯಾರು ನಡೆಸಿಕೊಡಲಿದ್ದಾರೆ. ಹೇಗೆ ನಡೆಸಲಿದ್ದಾರೆ. ಸ್ಪರ್ಧಿಗಳಿಗೆ ಯಾವ ರೀತಿ ಪಾಠ ಮಾಡಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.