ಬಿಗ್ ಬಾಸ್ ಸೀಸನ್ 11 (BBK 11) ಕಲರ್ಸ್ ಕನ್ನಡ ವಾಹಿನಿಯಲ್ಲಿ (Colours Kannada) ಅತ್ಯಧಿಕ ಟಿವಿಆರ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ನಡುವೆ ನಟ, ನಿರೂಪಕ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ 11 (BBK 11) ನನ್ನ ಕೊನೆಯ ನಿರೂಪಣೆ ಎನ್ನುವ ಮೂಲಕ ತನ್ನ ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ಪ್ರಿಯರಿಗೆ ನಟ ಕಿಚ್ಚ ಸುದೀಪ್ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಸೀಸನ್ ನ ಎರಡನೇ ವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಪ್ರಸಾರ ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಕಿಚ್ಚ ಸುದೀಪ್ (Kichcha Sudeep) ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಮಾತಿಗೆ ಸಾಕ್ಷಿ ದೊರೆತಂತಾಗಿದೆ.
ನಟ ಕಿಚ್ಚ ಸುದೀಪ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆರಂಭದಿಂದಲೇ ನಿರೂಪಕರಾಗಿ ಉಳಿದಿದ್ದರು. ಕಳೆದ 10 ಸೀಸನ್ ಗಳು ಹಾಗೂ ಒತ್ತಾಯದ ಮೇರೆಬ 11ನೇ ಸೀಸನ್ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದರು. ಆದರೆ, 11ನೇ ಸೀಸನ್ ಮುಗಿಯುವ ಮೊದಲೇ ಈ ಬಗ್ಗೆ ನಟ ಸುದೀಪ್ ಅವರು ಘೋಷಣೆ ಮಾಡಿದ್ದಾದರೂ ಯಾಕೆ? ಎನ್ನುವ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಕಿಚ್ಚ ಸುದೀಪ್ ಹೇಳಿದ್ದೇನು :
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಕಿಚ್ ಸುದೀಪ್ ಅವರು, ʼಬಿಗ್ ಬಾಸ್ ಕಾರ್ಯಕ್ರಮಕ್ಕೆ (BBK 11) ಅತಿ ಹೆಚ್ಚಿನ ಜನಪ್ರಿಯತೆ ತಂದಿರುವ ಜನತೆಗೆ ಧನ್ಯವಾದಗಳು. ಈ ಕಾರ್ಯಕ್ರಮ 9.9 ಟಿವಿ ರೇಟಿಂಗ್ ಪಡೆದಿರುವುದೇ ನಿಮ್ಮೆಲ್ಲರ ಪ್ರೀತಿ ಹಾಗೂ ಕಾಳಜಿಗೆ ಸಾಕ್ಷಿಯಾಗಿದೆ. ನನ್ನ 10+1 ವರ್ಷದ ಬಿಗ್ ಬಾಸ್ ನಿರೂಪಣೆ ಒಂದು ಯಶಸ್ಸಿನ ಪಯಣವೇ ಸರಿ. ಇದೀಗ, ನನಗೆ ಬೇಕಾದದ್ದರ ಕಡೆಗೆ ಹೋಗುವ ಸಮಯ ಬಂದಿದೆ. ಇದು ನನ್ನ ಕೊನೆಯ ಸೀಸನ್ ನಿರೂಪಣೆ. ನನ್ನ ನಿರ್ಧಾರವನ್ನು ಕಲರ್ಸ್ ವಾಹಿನಿ (Colours Kannada) ಮತ್ತು ನನ್ನ ಅಭಿಮಾನಿಗಳು ಹಾಗೂ ರಾಜ್ಯದ ಜನತೆ ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ. ಈ ಸೀಸನ್ ಅನ್ನು ಮತ್ತಷ್ಟು ಯಶಸಿಗೊಳಿಸೋಣʼ ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಇತಿಹಾಸ :
ಕನ್ನಡದ ಬಿಗ್ ಬಾಸ್ 2013 ರಲ್ಲಿ ಆರಂಭಗೊಂಡಿದೆ. ಆರಂಭದ 2 ವರ್ಷಗಳಲ್ಲಿ ಈಟಿವಿ ಶೋ ಪ್ರಸಾರ ಮಾಡಿತ್ತು. ಅದೇ ವಾಹಿನಿ ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡ (Colours Kannada) ಎಂದು ಹೆಸರು ಬದಲಾಯಿಸಿಕೊಂಡಿದೆ. 2013ರ ಮೊದಲ ಶೋ ಅನ್ನು ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಅಂದಿನಿಂದ ಕಿಚ್ಚ ಸುದೀಪ್ (Kichcha Sudeep) ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. 2013 ಮತ್ತು 2014ರಲ್ಲಿ ಮುಂಬೈನಲ್ಲಿ ಹಿಂದಿ ಬಿಗ್ ಬಾಸ್ ಶೋ ನಡೆಯುತ್ತಿದ್ದ ಮನೆಯಲ್ಲಿಯೇ ಕನ್ನಡ ಬಿಗ್ ಬಾಸ್ ಶೂಟಿಂಗ್ ಮಾಡಲಾಗಿತ್ತು. ಅನಂತರ ಎರಡೂ ಭಾಷೆಯ ಕಾರ್ಯಕ್ರಮಗಳ ಸಮಯದ ವ್ಯತ್ಯಾಸದಿಂದಾಗಿ ಬೆಂಗಳೂರಿನ ಬಿಡದಿಯಲ್ಲಿರುವ ಇನೋವೇಟಿವ್ ಸಿಟಿಯಲ್ಲಿಯೇ ನೂತನ ಬಿಗ್ ಬಾಸ್ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. 2015 ರಿಂದ ಇಲ್ಲಿಯೇ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ.
ಇನ್ನು, ಕಿಚ್ಚ ಸುದೀಪ್ (Kichcha Sudeep) ಬಿಗ್ ಬಾಸ್ ಸೀಸನ್ 11 (BBK 11) ಇದೇ ನನ್ನ ಕೊನೆಯ ನಿರೂಪಣೆ ಎಂದು ಅರ್ಧದಲ್ಲಿಯೇ ಹೇಳಿದ್ದರ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿವೆ. ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮದ ಉಸ್ತುವಾರಿಗಳು ಮತ್ತು ನಟ ಕಿಚ್ಚ ಸುದೀಪ್ ಅವರ ನಡುವೆ ಸಂಬಂಧ ಹಳಸಿದೆ ಎನ್ನುವ ಬಗ್ಗೆ ತಿಳಿದುಬರುತ್ತಿದೆ. ಆದಾಗ್ಯೂ, ನಟ ಕಿಚ್ಚ ಸುದೀಪ್ ಅವರು ಸೀಸನ್ 11 ರಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು. ಆದರೆ, ಕಲರ್ಸ್ ವಾಹಿನಿಯೇ ಅವರನ್ನು ಪಟ್ಟು ಹಿಡಿದು ಒಪ್ಪಿಸಿ ಕಾರ್ಯಕ್ರಮ ನಡೆಸುತ್ತಿದೆ.