ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಹೂಡಿಕೆಗಳ ಹೊರತಾಗಿ ಷೇರು ಮಾರುಕಟ್ಟೆ (Share Market) ಹಾಗೂ ಮ್ಯೂಚುವಲ್ ಫಂಡ್ (Mutual Fund) ಗಳಲ್ಲಿ ಜನರ ಹೂಡಿಕೆ ಹೆಚ್ಚುತ್ತಿದೆ. ದುಡ್ಡನ್ನು ದುಡಿಸಬೇಕೆನ್ನುವ ಜನರ ಮನೋಸ್ಥಿತಿ ಬದಲಾಗಿರುವುದೇ ಇದೆಲ್ಲದಕ್ಕೂ ಕಾರಣ. ದೇಶದ ಬಹುತೇಕ ಮಧ್ಯಮ ವರ್ಗದ ಜನತೆ SIP (Systematic Investment Plan) ಯ ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಆರಂಭಿಸುತ್ತಿದ್ದಾರೆ.
ಭಾರತದಲ್ಲಿ ಮ್ಯೂಚುವಲ್ ಫಂಡ್ ಸಂಘದ (Association of Mutual Funds in India) ಪ್ರಕಾರದ ದೇಶಾದ್ಯಂತ 20.45 ಕೋಟಿ ಮ್ಯೂಚುವಲ್ ಫಂಡ್ ಖಾತೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ಖಾತೆಗಳ ಒಟ್ಟು ಹೂಡಿಕೆ ಬರೋಬ್ಬರಿ 66,04,057 ಕೋಟಿ ರೂ.ಗಳಷ್ಟಾಗಿದೆ. ಅಲ್ಲದೇ, ಮುಂದಿನೆ ಕೆಲವೇ ವರ್ಷಗಳಲ್ಲಿ ಈ ಹೂಡಿಕೆ ಪ್ರಮಾಣ 100 ಲಕ್ಷ ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಿದೆ.
ಈ ಬೆಳವಣಿಗೆಗಳನ್ನು ಕಂಡಾಗ ದೇಶದಲ್ಲಿ ಸಾಂಪ್ರದಾಯಿಕವಾಗಿ ಬ್ಯಾಂಕುಗಳಲ್ಲಿ ಸಂಚಿತ ಠೇವಣಿ (Fixed Deposit) ಮಾಡುವವರು ಹಾಗೂ ಖಾತೆಗಳಲ್ಲಿ ಹಣ ಉಳಿತಾಯ ಮಾಡುವವರು ಈ ಹಣವನ್ನು ಷೇರು ಮಾರುಕಟ್ಟೆಯೆಡೆಗೆ ವರ್ಗಾಯಿಸುತ್ತಿದ್ದಾರೆ. ಹಲವು ಸಾಂಪ್ರದಾಯಿಕ ಹೂಡಿಕೆಗಳಿಗಿಂತ ಮ್ಯೂಚುವಲ್ ಫಂಡ್ ಹೂಡಿಕೆಯು ಸದ್ಯದ ದಿನಗಳಲ್ಲಿ ಲಾಭದಾಯಕವಾಗಿದೆ. ವಿವಿಧ ಮ್ಯೂಚುವಲ್ ಫಂಡ್ ಗಳು ಹಲವು ರೀತಿಯ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ತಮ್ಮ ಗ್ರಾಹಕರಿಗೆ ಲಾಭ ತಂದುಕೊಡುವಲ್ಲಿ ಶ್ರಮಿಸುತ್ತಿವೆ. ಮಾರುಕಟ್ಟೆಯ ದೊಡ್ಡ ಕ್ರಾಶ್ ನಂತಹ ಅಪರೂಪದ ಸಂಕಷ್ಟಗಳ ಹೊರತಾಗಿ ಇಲ್ಲಿ ಹೂಡಿಕೆದಾರರಿಗೆ ಯಾವುದೇ ಭಯವಿಲ್ಲ ಮತ್ತು ಹೂಡಿದ ಹಣ ಸುಭದ್ರವಾಗಿರುತ್ತದೆ ಎಂಬ ಭರವಸೆಯೇ ಮ್ಯೂಚುವಲ್ ಪಂಡ್ (Mutua ಗಳಲ್ಲಿ ಹೂಡಿಕೆ ಅಧಿಕವಾಗಲು ಕಾರಣವಾಗಿವೆ.
ಈ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವಾಗ ನೀವು ಹಲವು ಸಂಗತಿಗಳನ್ನು ತಿಳಿದಿರಲೇಬೇಕಾಗುತ್ತದೆ. ಯಾವ ಮ್ಯೂಚುವಲ್ ಫಂಡ್ ಮೇಲೆ ಹಣ ಹೂಡುತ್ತಿದ್ದೇನೆ, ಆ ಮ್ಯೂಚುವಲ್ ಫಂಡ್ ನ ಹಿಂದಿನ ಫರ್ಪಾಮೆನ್ಸ್ ಹೇಗಿದೆ, ಫಂಡ್ ಮ್ಯಾನೇಜರ್ ಯಾವ ಕಂಪೆನಿಗಳ ಮೇಲೆ ನಮ್ಮ ಹಣ ಹೂಡಿಕೆ ಮಾಡುತ್ತಾರೆ ಎನ್ನುವುದು ತಪ್ಪದೇ ತಿಳಿದುಕೊಳ್ಳಬೇಕು.
ಕೆಲವರು Mutual Funds ಗಳಲ್ಲಿ ಹೂಡಿಕೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಿ, ಅನಂತರ ಕೈ ಕೈ ಹಿಸುಕಿಕೊಳ್ಳುವುದೂ ಉಂಟು. ನಾವು ಈ ಅಂಕಣದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಪ್ರಮುಖವಾಗಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಹಾಗೂ ಯಾವ ಅಂಶಗಳ ಕಡೆಗೆ ಮಹತ್ವ ನೀಡಬೇಕು ಎನ್ನುವುದು ನೋಡೋಣ.
Mutual Fund ಹೂಡಿಕೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ!
1) ಹೂಡಿಕೆಯ ಉದ್ದೇಶ ತಿಳಿಯದೇ ಇರುವುದು.
ನೀವು Mutual Funds ಗಳಲ್ಲಿ ಹೂಡಿಕೆ ಆರಂಭಿಸುವ ಮೊದಲು ಯಾವ ಉದ್ದೇಶಕ್ಕಾಗಿ ಹೂಡಿಕೆ ಮಾಡುತ್ತಿದ್ದೇನೆ ಎಂಬುದರ ಸ್ಪಷ್ಟ ಅರಿವಿರಬೇಕು. ನಿಮ್ಮ ಉದ್ದೇಶದ ಸ್ಪಷ್ಟತೆ ಇದ್ದಾಗ ಮಾತ್ರ ನಿಮಗೆ ಎಷ್ಟು ವರ್ಷಗಳ ವರೆಗೆ ಹೂಡಿಕೆ ಮಾಡಬೇಕು, SIP ಮಾಡುವುದಿದ್ದರೆ ಮಾಸಿಕ ಎಷ್ಟು ರೂ.ಗಳ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯಲು ಸಾಧ್ಯ. ಉದಾಹರಣೆಗೆ ಮುಂದಿನ ಇಂತಿಷ್ಟು ವರ್ಷಗಳಲ್ಲಿ ಕಾರು ಖರೀದಿ ಮಾಡಬೇಕು, ನೂತನ ಮನೆ ಖರೀದಿಸಬೇಕು, ಮಕ್ಕಳ ಶಿಕ್ಷಣಕ್ಕೆ ಹಾಗೂ ಮದುವೆಗೆ ಹಣ ಹೊಂದಿಸಬೇಕು ಸೇರಿದಂತೆ ಇತ್ಯಾದಿ ಹೂಡಿಕೆಯ ಉದ್ದೇಶಗಳಿದ್ದರೆ ಉತ್ತಮ.
2) ಫಂಡ್ಗಳ ಹೋಲಿಕೆ
ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವಾಗ ಯಾವ ಫಂಡ್ ಎಷ್ಟು ಹೇಗೆ ಕಾರ್ಯನಿರ್ವಹಿಸುತ್ತದೆ. ಯಾವೆಲ್ಲ ಕಂಪೆನಿಗಳ ಮೇಲೆ ಹೂಡಿಕೆ ಮಾಡುತ್ತದೆ ಎನ್ನುವುದರ ಪ್ರಾಥಮಿಕ ಜ್ಞಾನ ಇರಲೇಬೇಕು. ಸೆಬಿ (SEBI) ಯು ಮಾರುಕಟ್ಟೆಯ ಟಾಪ್ 100 ಕಂಪೆನಿಗಳನ್ನು ಲಾರ್ಜ್ ಕ್ಯಾಪ್ ಕಂಪೆನಿಗಳೆಂದು (Large Cap Companies) ಹಾಗೂ ಕೊನೆಯ 250 ಕಂಪೆನಿಗಳನ್ನು ಸ್ಮಾಲ್ ಕ್ಯಾಪ್ ಕಂಪೆನಿಗಳೆಂದು (Small Cap Companies) ಹಾಗೂ ಮಧ್ಯದ ಕಂಪೆನಿಗಳನ್ನು ಮಿಡ್ ಕ್ಯಾಪ್ ಕಂಪೆನಿಗಳೆಂದು (Mid Cap Companies) ಎಂದು ವಿಭಾಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀವು ಲಭ್ಯವಿರುವ ಮ್ಯೂಚುವಲ್ ಪಂಡ್ ಗಳು ಯಾವುದು ಉತ್ತಮ ಎಂದು ಇತರೆ ಫಂಡ್ ಗಳ ಜೊತೆ ಹೋಲಿಕೆ ಮಾಡಿ ನೋಡಬೇಕು.
3) ಹೂಡಿಕೆಯ ರಿಸ್ಕ್ ಬಗ್ಗೆ ತಿಳಿದಿರಬೇಕು
Mutual Funds ಗಳಲ್ಲಿ ಹೂಡಿಕೆ ಮಾಡುವಾಗ ರಿಸ್ಕ್ ಫ್ಯಾಕ್ಟರ್ ನಿಮಗೆ ತಿಳಿದಿರಲೇಬೇಕು. ಹೂಡಿಕೆಯಲ್ಲಿ Risk Averse, Conservative, Balanced, Growth ಮತ್ತು Aggressive ಎನ್ನುವ ವಿಧಗಳಿದ್ದು, ನೀವು ಬಯಸುವ ಹಣದ ಅಭಿವೃದ್ಧಿ ಹಾಗೂ ನೀವು ತೆಗೆದುಕೊಳ್ಳಬಹುದಾದ ರಿಸ್ಕ್ ಆಧಾರದ ಮೇಲೆ ಹಣಹೂಡಿಕೆ ಮಾಡಬೇಕು. Growth ಮತ್ತು Aggressive ಅಂತಹ ಮ್ಯೂಚುವಲ್ ಫಂಡ್ ಗಳು ನಿಮಗೆ ಹೆಚ್ಚಿನ ರಿಟರ್ನ್ಸ್ ಕೊಡುತ್ತವೆ. ಆದರೆ, ಇಲ್ಲಿ ರಿಸ್ಕ್ ಪ್ರಮಾಣವೂ ಹೆಚ್ಚಳವಾಗಿರುತ್ತದೆ.
4) ಇತರೆ ಹೂಡಿಕೆದಾರರ ತಂತ್ರಗಳ ಬಳಕೆ
ನಿಮ್ಮ ಸ್ನೇಹಿತರು ಅಥವಾ ಇತರೆ ಯಶಸ್ವಿ ಹೂಡಿಕೆದಾರರು ಅನುಸರಿಸುವ ತಂತ್ರಗಳನ್ನು ನೀವೂ ಬಳಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಹೂಡಿಕೆ ಮಾಡುವ ಹಣ ನಿಮ್ಮ ಬೆವರಿನ ಶ್ರಮ ಆಗಿರುವುದರಿಂದ ಹೂಡಿಕೆ ಮಾಡುವ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ಅದೇನೆ ಇದ್ದರೂ ನಿಮ್ಮ ವಿವೇಚನೆಗೆ ಹೆಚ್ಚಿನ ಆದ್ಯತೆ ನೀಡಿ.
5) ಪೋರ್ಟ್ಪೋಲಿಯೋಗಳಲ್ಲಿ ವೈವಿಧ್ಯತೆ
ನೀವು ಒಂದೇ Mutual Funds ನಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವುದಕ್ಕಿಂತ ಬೇರೆ ಬೇರೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆಮಾಡುವುದು ಉತ್ತಮ. ಈ ರೀತಿ ಇದ್ದಾಗ ಮುಂದೆ ಎದುರಾಗಬಹುದಾದ ರಿಸ್ಕ್ ಗಳಿಂದ ನೀವು ಪಾರಾಗಬಹುದು. ಅಲ್ಲದೇ, ಮ್ಯೂಚುವಲ್ ಫಂಡ್ ಹೂಡಿಕೆ ಲಾಂಗ್ ಟರ್ಮ್ (Longterm Investment) ಆಗಿರುವುದಿಂದ ಯಾವುದೇ ಕ್ಷಣದಲ್ಲಿ ಮಾರುಕಟ್ಟೆ ಕುಸಿತವಾದಾಗ ನೀವು ವಿಚಲಿತರಾಗಿ ನಿಮ್ಮ ಹಣ ಹಿಂತೆಗೆದುಕೊಳ್ಳಬಾರದು.
ಷೇರು ಮಾರುಕಟ್ಟೆಗೆ (Share Market) ಹೊಸದಾಗಿ ಪ್ರವೇಶ ಮಾಡಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರುಈ ಮೇಲಿನ ಅಂಶಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು.