ದೇಶದಲ್ಲಿ ಹಲವು ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿವೃತ್ತಿ ಹೊಂದಿರುವ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಸುರಕ್ಷತೆ ನೀಡುವ ನೌಕರರ ಪಿಂಚಣಿ ಯೋಜನೆ (EPS Pension) ಮೂಲಕ ಹಲವಾರು ನಿವೃತ್ತ ನೌಕರರು ತಮ್ಮ ನಿವೃತ್ತಿಯ ಜೀವನವನ್ನು ಆನಂದಿಸುತ್ತಿದ್ದಾರೆ. ಮಾಸಿಕವಾಗಿ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಬಹಳಷ್ಟು ಸಹಕಾರಿಯಾಗಿದ್ದು, ಇದೀಗ ಕೇಂದ್ರ ಸರ್ಕಾರದ ಮತ್ತೊಂದು ಪ್ರಸ್ತಾಪ ಪಿಂಚಣಿದಾರರ (Pensioners) ಪಾಲಿಗೆ ಶುಭಸುದ್ದಿ ನೀಡಿದೆ.
ಹೌದು. ಇದೀಗ ನೌಕರರ ಪಿಂಚಣಿ ಯೋಜನೆ (EPF) ಗಾಗಿ ಕೇಂದ್ರೀಕೃತ ಪಿಂಚಣಿಪಾವತಿ ವ್ಯವಸ್ಥೆ (CPPS) ಗೆ ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡಿದ್ದು, ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್ ಶಾಖೆಯಿಂದ ಕೂಡ ಪಡೆದುಕೊಳ್ಳುವ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ, ಭಾರತದ ಯಾವುದೇ ಬ್ಯಾಂಕ್ಗಳ ಯಾವುದೇ ಶಾಖೆಗಳಿಂದ ಪಿಂಚಣಿ ಹಣವನ್ನು ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದ್ದು, ಇಂತಹ ಒಂದು ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕೇಂದ್ರ ಕಾರ್ಮಿಕ ಸಚಿವರಾದ ಮನ್ಸುಖ್ ಮಾಂಡವಿಯಾ (Mansukh L. Mandaviya), ಇಪಿಎಫ್ಓ ವ್ಯವಸ್ಥೆಯ ಆಧುನೀಕರಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದಿದ್ದಾರೆ. ಹಾಗಿದ್ದರೆ ಸರ್ಕಾರ ಅನುಮೋದಿಸಿರುವ ಈ ಹೊಸ ವ್ಯವಸ್ಥೆಯಲ್ಲಿ ಪಿಂಚಣಿದಾರರಿಗೆ ಏನೇನು ಅನುಕೂಲಗಳಿವೆ ಎಂದು ನೋಡೋಣ ಬನ್ನಿ.
- ದೇಶದ ಯಾವುದೇ ಭಾಗದಲ್ಲಿ ಯಾವುದೇ ಬ್ಯಾಂಕ್ನ ಯಾವುದೇ ಶಾಖೆಯಿಂದ ಪಿಂಚಣಿ ಹಣ (EPS Pension) ಪಡೆಯುವ ಸೌಲಭ್ಯ.
- ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನದ ಮೂಲಕ ಎಲ್ಲಾ ಪಿಂಚಣಿದಾರರಿಗೂ ಅನುಕೂಲ.
- ಪಿಂಚಣಿದಾರನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅಥವಾ ಬ್ಯಾಂಕ್ ಶಾಖೆಯನ್ನು ವರ್ಗಾಯಿಸಿಕೊಂಡರೆ ಸಹ, ಪಿಪಿಓ (PPO Details) ವರ್ಗಾಯಿಸದೇ ಅತ್ಯಂತ ಸುಲಭವಾಗಿ ಪಿಂಚಣಿ ಪಡೆಯುವ ಅವಕಾಶ.
- ನಿವೃತ್ತಿಯ ನಂತರ ಬೇರೆ ಊರುಗಳಿಗೆ ತೆರಳುವ ಪಿಂಚಣಿದಾರರಿಗೆ ಅನುಕೂಲ.
EPS Pension: ಬರೋಬ್ಬರಿ 78 ಲಕ್ಷ ಪಿಂಚಣಿದಾರರಿಗೆ ಅನುಕೂಲ
ಸರ್ಕಾರ ತಂದ ಈ ಸಿಪಿಪಿಎಸ್ (CPPS) ವ್ಯವಸ್ಥೆಯಿಂದ 78 ಲಕ್ಷ ಪಿಂಚಣಿದಾರರಿಗೆ ಅಪಾರ ಅನುಕೂಲವಾಗಲಿದ್ದು, ಪಿಂಚಣಿಗಾಗಿ ಬ್ಯಾಂಕುಗಳಿಗೆ ಅಲೆಯುವ ಕೆಲಸ ತಪ್ಪಲಿದೆ. ಅಷ್ಟೇ ಅಲ್ಲದೇ, ಈ ವ್ಯವಸ್ಥೆಯಿಂದ ಪಿಂಚಣಿದಾರರು ವೆರಿಫಿಕೇಶನ್ (Verification) ಗೆ ಬ್ಯಾಂಕ್ಗೆ ತೆರಳಬೇಕಾದ ಅವಶ್ಯಕತೆಯೇ ಇಲ್ಲ. ಪಿಂಚಣಿಯ ಪ್ರತಿ ಕಂತು ಕೂಡ ಬಿಡುಗಡೆಗೊಂಡ ತಕ್ಷಣವೇ ನೇರವಾಗಿ ಖಾತೆಗೇ ಜಮೆಯಾಗುವುದರಿಂದ, ಪಿಂಚಣಿದಾರರು ಬ್ಯಾಂಕ್ ಮತ್ತು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಹಾಗೆಯೇ ಬ್ಯಾಂಕ್ ಪಾವತಿ ವ್ಯವಸ್ಥೆಗಳಲ್ಲಿ ಕೂಡ ಈವರೆಗೆ ಆಗುತ್ತಿದ್ದ ವಿಳಂಬವೂ ಕೂಡ ಕಡಿಮೆಯಾಗಲಿದ್ದು, ಪಾವತಿ ವೆಚ್ಚವೂ ಕೂಡ ಕಡಿಮೆಯಾಗಲಿದೆ.
ಈ CPPS ಸೌಲಭ್ಯ 2025 ರ ಜ.1 ರಿಂದ ಲಭ್ಯ!
ಪಿಂಚಣಿದಾರರಿಗೆ ತಾವಿರುವ ಸ್ಥಳದಿಂದಲೇ ಪಿಂಚಣಿ ಪಡೆಯುವ ಸೌಲಭ್ಯ ನೀಡುವ ಈ ಯೋಜನೆ ಅಥವಾ ಉಪಕ್ರಮವನ್ನು ಸರ್ಕಾರ ಅನುಮೋದಿಸಿದ್ದು, 2025 ರ ಜನವರಿ 1 ರಿಂದಲೇ ಈ ಅವಕಾಶ ಲಭ್ಯವಾಗಲಿದೆ. ಜ.1 ರಿಂದ ಕೇಂದ್ರ ಸರ್ಕಾರದ ಇಪಿಎಫ್ಓ (EPFO) ನ ಐಟಿ ಉನ್ನತೀಕರಣ ಯೋಜನೆಯಾದ ಕೇಂದ್ರೀಕೃತ ಐಟಿ ಎನೇಬಲ್ಡ್ ಸಿಸ್ಟಂ (CTES 2.01) ಭಾಗವಾಗಿ ಈ ಸೌಲಭ್ಯ ಆರಂಭಗೊಳ್ಳಲಿದ್ದು, ದೇಶಾದ್ಯಂತ ಎಲ್ಲಾ ಪಿಂಚಣಿದಾರರಿಗೂ ಹೊಸ ವರ್ಷದ ಆರಂಭದಲ್ಲೇ ಖುಷಿ ನೀಡಲಿದೆ. ಹಾಗೆಯೇ ಇನ್ನು ಮುಂದೆ ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಗೂ ಇದು ಸಹಕಾರಿಯಾಗಲಿದ್ದು, ಪಿಂಚಣಿ ಪಾವತಿ ಮುಂಬರುವ ದಿನಗಳಲ್ಲಿ ಅಂಗೈಯಲ್ಲೇ ದೊರಕಿದರೂ ಅಚ್ಚರಿಯಿಲ್ಲ.