ರಾಜ್ಯದಲ್ಲಿ ಅನರ್ಹ ಪಡಿತರ ಕಾರ್ಡ್ಗಳನ್ನು ರದ್ದು ಮಾಡುವ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೇಗ ನೀಡಿದೆ. ರಾಜ್ಯದಲ್ಲಿ ಒಟ್ಟು 22 ಲಕ್ಷ ಅನರ್ಹ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ಗಳು (BPL Card) ಪತ್ತೆಯಾಗಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ನಿಜ ಫಲಾನುಭವಿಗಳಾದ ಬಡವರ ಪಡಿತರ ಕಾರ್ಡ್ಗಳೂ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಯು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡದವರಿಗೆ ಅಂತಿಮ ಗಡುವು ನೀಡಿತ್ತು. ಈ ಗಡುವಿನೊಳಗಡೆ ಲಿಂಕ್ ಮಾಡದವರು ದಂಡ ಕಟ್ಟಿ ಲಿಂಕ್ ಮಾಡಬೇಕಿತ್ತು. ಈ ವೇಳೆ, ದಂಡ ಕಟ್ಟಿ ಆಧಾರ್-ಪ್ಯಾನ್ ಲಿಂಕ್ ಮಾಡಿದ ರೇಷನ್ ಕಾರ್ಡ್ ಫಲಾನುಭವಿಗಳನ್ನು ಆದಾಯ ತೆರಿಗೆ ಕಟ್ಟುವವರು ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯಾದಾದ್ಯಂತ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಸರ್ಕಾರ ಈ ನಿರ್ಧಾರವನ್ನು ಕಂಡಿಸಿವೆ.
ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ರಾಜ್ಯ ಸರ್ಕಾರ ಆಹಾರ ಇಲಾಖೆ – ಆಡಳಿತಕ್ಕೆ ಮನವಿ ಮಾಡಿತ್ತು. ಆಹಾರ ಇಲಾಖೆಯು ಇ-ತಂತ್ರಾಂಶದ ಮೂಲಕ ರಾಜ್ಯದಲ್ಲಿ 22,62,412 ಅನರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ಗಳು ಇರುವ ಬಗ್ಗೆ ಪತ್ತೆ ಹಚ್ಚಿದೆ. ಇದರಲ್ಲಿ, 10,06,152 ರಷ್ಟು ಅಂತ್ಯೋದಯ ರೇಷನ್ ಕಾರ್ಡ್ಗಳೂ ಇವೆ ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಿದೆ.
22,62,412 ಅನರ್ಹ ರೇಷನ್ ಕಾರ್ಡ್ಗಳು :
ಸರ್ಕಾರದ ನಿಯಮಗಳ ವಿರುದ್ಧವಾಗಿ ರೇಷನ್ ಕಾರ್ಡ್ ಪಡೆದವರ ಮಾಹಿತಿಯನ್ನು ಆಹಾರ ಇಲಾಖೆ ಕಲೆ ಹಾಕಿದೆ. ಇದರಲ್ಲಿ ಪ್ರಮುಖವಾಗಿ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಪ್ರಮಾಣವೇ ಹೆಚ್ಚಿದೆ.
ರಾಜ್ಯದಲ್ಲಿ 10,97,621 ಬಿಪಿಎಲ್ ಕಾರ್ಡ್ಗಳು (BPL Card) ಹಾಗೂ 10,54,368 ಅಂತ್ಯೋದಯ ಕಾರ್ಡ್ ಗಳು ಅನರ್ಹವಾಗಿವೆ. 1,06,152 ಕಾರ್ಡ್ ಗಳನ್ನು ಆದಾಯ ತೆರಿಗೆ ಪಾವತಿದಾರರು ಪಡೆದುಕೊಂಡಿದ್ದಾರೆ. ಇದರಲ್ಲಿ 4,272 ಪಡಿತರ ಚೀಟಿಗಳು (BPL Card) ಕೆಜಿಐಡಿ, ಹೆಚ್.ಆರ್.ಎಂ.ಎಸ್.ನಲ್ಲಿ ಜೋಡಣೆ ಆಗಿರುವುದನ್ನು ಇ- ಆಡಳಿತ ಕೇಂದ್ರ ಪತ್ತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಹತ್ತು ದಿನಗಳ ಒಳಗಾಗಿ ಅನರ್ಹ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಎಲ್ಲಾ ಜಿಲ್ಲೆಗಳ ಜಂಟಿ ಹಾಗೂ ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಈ ಬಗ್ಗೆ ಸೂಚನೆ ನೀಡಿದೆ. ಕಾರು ಹೊಂದಿರುವವರು ಸೇರಿದಂತೆ ಸರ್ಕಾರದ 14 ಮಾನದಂಡಗಳ ಆಧಾರದ ಮೇಲೆ ಅನರ್ಹ ಕಾರ್ಡ್ ಗಳನ್ನು ಪತ್ತೆ ಹೆಚ್ಚುವಂತೆಯೂ ತಿಳಿಸಿದೆ.
ನಿಮ್ಮ ಪಡಿತರ ಚೀಟಿ ರದ್ದಾಗಿದ್ದರೆ ಹೀಗೆ ಪರಿಶೀಲಿಸಿ :
ಆಹಾರ ಇಲಾಖೆಯು ನಿಮ್ಮ ಪಡಿತರ ಚೀಟಿಯನ್ನೂ (BPL Card) ಅನರ್ಹ ಎಂದು ಪರಿಗಣಿಸಿದೆಯೇ ಎನ್ನುವುದನ್ನೂ ನೀವು ಪರಿಶೀಲಿಸಿಕೊಳ್ಳಬಹುದು.
– ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು (ಇಲ್ಲಿ ಕ್ಲಿಕ್ ಮಾಡಿ)
– ಮುಖಪುಟಕ್ಕೆ ಭೇಟಿ ನೀಡಿದ ನಂತರ ಇ-ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.
– ಅಲ್ಲಿ ಕಾಣುವ ರದ್ದು ಮಾಡಿರುವ ಅಥವಾ ತಡೆ ಹಿಡಿಯಲಾದ ಪಡಿತರ ಚೀಟಿ (BPL Card) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
– ಕೊನೆಗೆ ನಿಮ್ಮ ಜಿಲ್ಲೆ, ತಾಲ್ಲೂಕನ್ನು ಆಯ್ಕೆ ಮಾಡಿದರೆ, ತಲ್ಲೂಕಿನಲ್ಲಿ ರದ್ದಾದ ಚೀಟಿಗಳ ಪಟ್ಟಿ ದೊರೆಯುತ್ತದೆ. ಇಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗಿದೆಯೋ ಇಲ್ಲವೋ ಎನ್ನುವುದನ್ನು ನೀವು ಪರೀಶೀಲಿಸಿಕೊಳ್ಳಿ.