ಇತ್ತೀಚೆಗಷ್ಟೇ ಮಳೆಗಾಲದ ಮುನ್ನ ಸುಬ್ರಹ್ಮಣ್ಯ ಸಮೀಪದ ರಮ್ಯರಮಣೀಯ ಕುಮಾರ ಪರ್ವತದ ಟ್ರೆಕ್ಕಿಂಗ್ ಬಗ್ಗೆ ಪ್ರವಾಸಿಗರಿಗೆ ರಾಜ್ಯ ಅರಣ್ಯ ಇಲಾಖೆ ಕಹಿಸುದ್ದಿಯೊಂದನ್ನು ನೀಡಿತ್ತು. ಪರ್ವತಕ್ಕೆ ಟ್ರೆಕ್ಕಿಂಗ್ಗೆ ಆಗಮಿಸುವವರ ಸಂಖ್ಯೆ ಒಂದೇ ಸಮನೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಕುಮಾರ ಪರ್ವತದ ಟ್ರೆಕ್ಕಿಂಗ್ (Kumara Parvatha Trek) ನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಿದ್ದೇವೆ ಎಂದಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre), ಇದೀಗ ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಹೌದು. ದೇಶ ವಿದೇಶ, ರಾಜ್ಯ ಹೊರರಾಜ್ಯದ ಪ್ರವಾಸಿಗರಿಗೆ ಕುಮಾರ ಪರ್ವತದಲ್ಲಿ ಸುರಕ್ಷತಾ ದೃಷ್ಟಿಯಿಂದ ಮಳೆಗಾಲಕ್ಕೂ ಮುನ್ನ ನಿರ್ಬಂಧ ಹೇರಲಾಗಿತ್ತು. ಇದು ಹಲವಾರು ಚಾರಣಪ್ರಿಯರ ಕೆಂಗಣ್ಣಿಗೂ ಗುರಿಯಾಗಿತ್ತು. ಆದರೆ, ಇದೀಗ ಆ ಬಗ್ಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಗುಡ್ ನ್ಯೂಸ್ ನೀಡಿದ್ದು, ಟ್ರೆಕ್ಕಿಂಗ್ ಹೋಗುವವರ ಮುಖದಲ್ಲಿ ಸಂತಸ ಅರಳಿದೆ.
Kumara Parvatha Trek: ಕುಮಾರ ಪರ್ವತ ಟ್ರೆಕ್ ಈವರೆಗೆ ನಿಂತಿದ್ದೇಕೆ?
ಜನವರಿ 27, 28 ರಂದು ನಾಲ್ಕೈದು ಸಾವಿರಕ್ಕೂ ಮಿಕ್ಕಿ ಚಾರಣಿಗರು ಒಮ್ಮೆಗೇ ಕುಮಾರ ಪರ್ವತ (Kumara Parvatha Trek) ವನ್ನು ಹತ್ತಿದ ಕಾರಣದಿಂದಾಗಿ, ನೂಕುನುಗ್ಗಲಿನ ಜೊತೆಗೆ ಕಡಿದಾದ ಪರ್ವತದಲ್ಲಿ ಅರಣ್ಯ ಇಲಾಖೆಗೆ ಹಾಗೂ ಪೊಲೀಸರಿಗೆ ಚಾರಣಿಗರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿತ್ತು. ಆದರೆ, ಅಂದು ಸೀಮಿತ ಜನರಿಗೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಲು ನಿಲ್ಲಿಸಲಾಗಿದ್ದ ಚಾರಣ ನಾಳೆ ಅಂದರೆ ಅಕ್ಟೋಬರ್ 3 ರಿಂದ ಆರಂಭವಾಗಲಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ಟ್ರೆಕ್ಕಿಂಗ್ ಸ್ಥಳಗಳಿಗೆ ಟಿಕೆಟ್: ಒಂದೇ ವೆಬ್ಸೈಟ್ನಲ್ಲಿ ನಾಳೆಯಿಂದ ಲಭ್ಯ
ರಾಜ್ಯದ ಎಲ್ಲಾ ಚಾರಣ ಸ್ಥಳಗಳಿಗೆ ಒಂದೇ ವೆಬ್ಸೈಟ್ ಮೂಲಕ ಚಾರಣ ಟಿಕೆಟ್ ಖರೀದಿಸಲು ಸರ್ಕಾರ ವ್ಯವಸ್ಥೆಯನ್ನು ರೂಪಿಸಿದ್ದು, ಟಿಕೆಟ್ ಖರೀದಿಸುವ ವ್ಯವಸ್ಥೆಯುಳ್ಳ ವೆಬ್ಸೈಟ್ ನಾಳೆ ವಿಕಾಸ ಸೌಧದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಈ ವೆಬ್ಸೈಟ್ ಮೂಲಕ ರಾಜ್ಯದ ಬಹುತೇಕ ಚಾರಣ ಸ್ಥಳಗಳಿಗೆ ಟಿಕೆಟ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರೊಂದಿಗೆ, ಟ್ರೆಕ್ಕಿಂಗ್ ಸ್ಥಳಗಳಿಗೆ ಆಗಮಿಸುವ ಜನಸಂಖ್ಯೆಯ ನಿಯಂತ್ರಣವೂ ಇಲಾಖೆಗೆ ಸುಲಭಸಾಧ್ಯವಾಗಲಿದೆ.
ರಾಜ್ಯದ ಬಹುತೇಕ ಚಾರಣ ಸ್ಥಳಗಳಿಗೆ ಗೂಗಲ್ ಮೂಲಕ ರೇಟಿಂಗ್ ನೋಡಿ ಪ್ರಕೃತಿ ಸೌಂದರ್ಯ ಅನುಭವಿಸಲು ಬರುವವರ ಸಂಖ್ಯೆ ಮಿತಿ ಮೀರುತ್ತಿದೆ. ಜಲಪಾತಗಳು, ಬೆಟ್ಟಗಳಂತಹ ಚಾರಣ ತಾಣಗಳಿಗೆ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿಗೆ ಜನ ತೆರಳಿದಲ್ಲಿ ಪ್ರಕೃತಿಗೆ ಹಾನಿಯಾಗುವುದನ್ನು ಅರಿತ ಇಲಾಖೆ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಷ್ಟೇ ಅಲ್ಲದೇ, ಕುಮಾರ ಪರ್ವತ (Kumara Parvatha Trek) ದಂತಹ ಪ್ರವಾಸಿ ತಾಣಗಳಲ್ಲಿ ಶಿಸ್ತು ಅಥವಾ ಸ್ವಚ್ಛತೆ ಕಾಪಾಡದೇ, ಅನಾಹುತ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಹಾಗೂ ದಂಡ ವಿಧಿಸಲು ಕೂಡ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿ, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.