ಆಧುನಿಕ ಜೀವನಶೈಲಿಯ ಪರಿಣಾಮ ಮಾನವ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ನಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಹಿಂದೆಂದಿಗಿತಲೂ ಈಗ ಅನಿವಾರ್ಯವಾಗಿದೆ. ನಾವಾಗಿಯೇ ಸೇವಿಸುವ ಪಾನೀಯಗಳು, ಆಹಾರಗಳು ನಮ್ಮ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ.
ಮಾನವನಲ್ಲಿ ಹೃದಯದಷ್ಟೇ ಮುಖ್ಯವಾದುದು ಕಿಡ್ನಿಯ ಭಾಗ. ಇತ್ತೀಚಿನ ದಿನಗಳಲ್ಲಿ ಕಿಡ್ನಿಯ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 800 ಜನ ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನುವುದನ್ನು ವೈದ್ಯಕೀಯ ವರದಿಗಳ ಬಹಿರಂಗಪಡಿಸಿವೆ. ಈ ನಿಟ್ಟಿನಲ್ಲಿ ನಮ್ಮ ಕಿಡ್ನಿಯ ಬಗ್ಗೆ ನಾವೇ ಜಾಗೃತಿವಹಿಸಿ, ರಕ್ಷಿಸಿಕೊಳ್ಳಬೇಕಾದ ಹಾಗೂ ಸುರಕ್ಷಿತವಾಗಿರಿಸಕೊಳ್ಳಬೇಕಾದ ಜವಾಬ್ದಾರಿ ನಮ್ಮದೆ. ಆದ್ದರಿಂದ ಕಿಡ್ನಿಯನ್ನು ಹೇಗೆ ಸುರಕ್ಷಿತವಾಗಿರಿಸಬಹುದು (Kidney Protecting Tips) ಎನ್ನುವುದನ್ನು ನೋಡೋಣ.
Kidney Protecting Tips : ಕಿಡ್ನಿ ಸುರಕ್ಷಿತವಾಗಿರಿಸಲು ಕೈಗೊಳ್ಳಬೇಕಾದ ಕ್ರಮಗಳು :
ಹೆಚ್ಚಿನ ನೀರಿನ ಸೇವೆನೆ : ಕಿಡ್ನಿ ಅಥವಾ ಮೂತ್ರಪಿಂಡದ ಉತ್ತಮ ಆರೋಗ್ಯಕ್ಕೆ ನಾವು ಪ್ರತಿನಿತ್ಯ ಸಾಕಷ್ಟು ನೀರನ್ನು ಕುಡಿಯಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಮೂತ್ರಪಿಂಡಗಳಲ್ಲಿನ ಕಲ್ಲುಗಳು (Kidney Stone) ಸೃಷ್ಠಿಯಾಗುವುದನ್ನು ಹಾಗೂ ಮೂತ್ರದ ಸೋಂಕುಗಳು ರಚನೆಯಾಗುವುದನ್ನು ತಡೆಯಬಹುದು. ದೈಹಿಕ ಆರೋಗ್ಯವಂತ ಮಾನವ ಪ್ರತಿ ದಿನ 2 ರಿಂದ 2.5 ಲೀಟರ್ ನೀರಿನ ಸೇವನೆ ಮಾಡಬೇಕು.
ಆರೋಗ್ಯಕರ ಆಹಾರ ಸೇವನೆ : ಕಿಡ್ನಿ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಆರೋಗ್ಯಕರ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಆಹಾರದಲ್ಲಿ ತರಕಾರಿಗಳಿ, ಸಿರಿಧಾನ್ಯಗಳು, ಹಣ್ಣುಗಳು ಹಾಗೂ ಪ್ರೊಟೀನ್ ಅಂಶಗಳುಳ್ಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಇದೇ ಸಮಯದಲ್ಲಿ ಉಪ್ಪು, ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬುಗಳು ಹಾಗೂ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.
ರಕ್ತದೊತ್ತಡದ ಮೇಲ್ವಿಚಾರಣೆ : ದೇಹದಲ್ಲಿನ ಅಧಿಕ ರಕ್ತದೊತ್ತಡವೂ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ. ಆದ್ದರಿಂದ, ರಕ್ತದೊತ್ತಡದ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುತ್ತಲೇ ಇರಬೇಕು. ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು, ಸೋಡಿಯಂಯುಕ್ತ ಆಹಾರವನ್ನು ಕಡಿಮೆ ಮಾಡಬೇಕು. ಅವಶ್ಯವಿದ್ದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸಬೇಕು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ : ಕಿಡ್ನಿ ಸಮಸ್ಯೆಗೆ ಸಕ್ಕರೆ ಖಾಯಿಲೆ ಅಥವಾ ಮಧುಮೇಹದ ಕಾಯಿಲೆಯು ಕಾರಣವಾಗಬಹುದು. ಆದ್ದರಿಂದ, ಮಧುಮೇಹ ಬಾರದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರವಹಿಸಬೇಕು. ಒಂದು ವೇಳೆ ನೀವು ಮಧುಮೇಹ ಹೊಂದಿದ್ದರೆ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಔಷಧಿಗಳ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಬೇಕು.
ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು : ದೇಹದ ಅಧಿಕ ತೂಕ ಅಥವಾ ಬೊಜ್ಜು ಮೂತ್ರಪಿಂಡ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದ ಅಧಿಕ ತೂಕವು ಕಿಡ್ನಿ ಸೇರಿದಂತೆ ವಿವಿಧ ಅಂಗಗಳ ಮೇಲೆ ಹೆಚ್ಚಿನ ಒತ್ತಡವನ್ನು ಸೃಷ್ಠಿಸುತ್ತದೆ. ಆದ್ದರಿಂದ, ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡುವ ಮೂಲಕ ತ್ತಮ ಆರೋಗ್ಯ ಹಾಗೂ ಉತ್ತಮ ದೈಹಿಕ ತೂಕ ಕಾಪಾಡಿಕೊಳ್ಳಿ.
ಧೂಮಪಾನ ಮಾಡಬೇಡಿ : ಧೂಮಪಾನವು ನಿಮ್ಮ ಶ್ವಾಸಕೋಶಗಳಿಗೆ ಹಾಗೂ ಮೂತ್ರಪಿಂಡಕ್ಕೆ ಹಾನಿಯನ್ನುಂಟುಮಾಡುತ್ತದೆ. ಸಿಗರೇಟು, ಬೀಡಿಯಂತಹ ವಸ್ತುಗಳಲ್ಲಿ ನಿಕೋಟಿನ್ ಹಾಗೂ ಇತರೆ ಹಾನಿಕಾರಕ ರಾಸಾಯನಿಕಗಳಿವೆ. ಇವು ನಿಮ್ಮ ಮೂತ್ರಪಿಂಡವನ್ನು ದುರ್ಬಲಗೊಳಿಸಬಹುದು ಹಅಗೂ ಅಪಾಯದ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೇ, ಧೂಮಪಾನ ಮಾಡುವವರ ಪಕ್ಕ ನಿಲ್ಲುವವರಗೂ ಹೆಚ್ಚಿನ ಜಾಗ್ರತೆ ವಹಿಸಬೇಕು. ಇದು ಸಿಗರೇಟ್ ಸೇದುವ ವ್ಯಕ್ತಿಗಳಿಂತಲೂ ಹೆಚ್ಚಿನ ಅಪಾಯ ನಿಮಗೆ ಉಂಟಾಗುವ ಸಾಧ್ಯತೆಯಿರುತ್ತದೆ.
ಮದ್ಯಪಾನ ನಿಯಂತ್ರಿಸಿ : ಮಿತಿಮೀರಿದ ಮದ್ಯಪಾನ ಸೇವನೆಯೂ ನಿಮ್ಮ ದೇಹದ ಮೂತ್ರಪಿಂಡಗಳು ಹಾಗೂ ಯಕೃತ್ತಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ ಕಿಡ್ನಿ ಪೇಲ್ಯುವರ್ ನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಮದ್ಯಪಾನ ಸೇವನೆ ನಿಯಂತ್ರಣ ಮಾಡುವುದು ಅತ್ಯವಶ್ಯಕ.
ನಿಯಮಿತ ವ್ಯಾಯಾಮ : ವ್ಯಾಯಾಮವು ನಿಮ್ಮನ್ನು ದಿನಪೂರ್ತಿ ಚೈತನ್ಯಭರಿತವಾಗಿಸುವಲ್ಲಿ ಸಹಾಯ ಮಾಡಲಿದೆ. ದೈಹಿಕ ವ್ಯಾಯಾಮವು ಮೂತ್ರಪಿಂಡ ಸೇರಿದಂತೆ ದೇಹದ ಎಲ್ಲಾ ಅಂಗಗಳು ಹಾಗೂ ಒಟಾರೆ ಆರೋಗ್ಯಕ್ಕೆ ಸದೃಢತೆಗೆ ಕಾರಣವಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಹಾಗೂ 75 ನಿಮಿಷಗಳ ಹೆಚ್ಚಿನ ತೀವ್ರತೆಯ ವ್ಯಾಯಾಮ ಮಾಡಬೇಕು. ವ್ಯಾಯಾಮದಲ್ಲಿ ವಾಕಿಂಗ್ ಮಾಡುವುದು, ಈಜುವುದು, ಸೈಕ್ಲಿಂಗ್ ಮಾಡುವುದು ಸೇರಿದಂತೆ ಇನ್ನತರೆ ವಿಧಗಳನ್ನು ಸೇರ್ಪಡೆಮಾಡಿಕೊಳ್ಳಬಹುದು.
ನಿಯಮಿತ ಆರೋಗ್ಯ ತಪಾಸಣೆ : ಸಂಭಾವ್ಯ ಮೂತ್ರಪಿಂಡದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಗುಣಮುಖರಾಗಲು ಆಗಿದಾಂಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಕಿಡ್ನಿಯ ಕಾರ್ಯ, ರಕ್ತದೊತ್ತಡ ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ವೈದ್ಯರೊಂದಿಗೆ ಸಂಪರ್ಕದಲ್ಲಿರುಬೇಕು ಅಥವಾ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತದೆ.
ನೋವು ನಿವಾರಕಗಳ ಮಿತಿಮೀರಿದ ಬಳಕೆ : ನೋವು ನಿವಾರಕ್ಕ ಮಾತ್ರೆಗಳು, ಔಷಧಿಗಳನ್ನು ನೀವು ಅತಿಯಾಗಿ ದೀರ್ಘಕಾಲದವರೆಗೆ ಬಳಸಿದರೆ ಮೂತ್ರಪಿಂಡಗಳಿಗೆ ಹಾನಿಯಾಗುವ ಸಂಭಾವ್ಯತೆ ಹೆಚ್ಚು. ನೀವೇನಾದರು, ನೋವು ನಿವಾರಕಗಳನ್ನು ಹೆಚ್ಚು ಬಳಸುತ್ತಿದ್ದರೆ ಆದಷ್ಟು ಕಡಿಮೆ ಮಾಡಿ ಹಾಗೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ನೋವು ನಿವಾರಕ ಮಾತ್ರೆಗಳ ದೀರ್ಘಕಾಲದ ಸೇವನೆಯು ದೇಹದ ಒಟ್ಟಾರೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಈ ಮೇಲಿನ ಮಾರ್ಗೋಪಾಯಗಳನ್ನು (Kidney Protecting Tips) ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀವು ಕಿಡ್ನಿ ಸಮಸ್ಯೆಯಿಂದ ದೂರವಿರಬಹುದು . ಸದೃಢ ಆರೋಗ್ಯವಂತರಾಗಲು, ಪ್ರತಿನಿತ್ಯ ಚೈತನ್ಯದಿಂದಿರಲು ಪ್ರತಿಯೊಬ್ಬರೂ ದುಶ್ಚಟಗಳನ್ನು ದೂರವಿಡುವುದು ಅನಿವಾರ್ಯ. ಅದರ ಜೊತೆಗೆ, ದೈಹಿಕ ಶ್ರಮ ಬೇಡದ ಕೆಲಸಗಳಲ್ಲಿ ಕಾರ್ಯನಿರತರಾದವರು ಬೆಳಿಗ್ಗೆ ಅಥವಾ ಸಾಯಂಕಾಲ ಕನಿಷ್ಠ 20-30 ನಿಮಿಷಗಳ ವಾಕಿಂಗ್ ಮಾಡಿದರೆ ಉತ್ತಮ.