ಕೆಲವರಿಗೆ ತಮ್ಮ ದೇಹದ ಅತಿಯಾದ ತೂಕವೇ ಚಿಂತೆಯಾಗಿ ಕಾಡುತ್ತದೆ. ಆದರೆ,ಇನ್ನು ಕೆಲವರಿಗೆ ತಮ್ಮ ಸಣಕಲು ದೇಹವೇ ಸಮಸ್ಯೆಯಾಗಿ ಕಾಣುತ್ತದೆ. ಆದರೆ, ದೇಹದ ತೂಕ ಹೆಚ್ಚಿಸಿಕೊಳ್ಳಲು ಹಾಗೂ ದೇಹದ ತೂಕ (Weight Loss) ಇಳಿಸಿಕೊಳ್ಳಲು ಹಲವರು ಬೇರೆಬೇರೆ ಮಾರ್ಗಗಳ ಮೊರೆಹೋಗುತ್ತಾರೆ. ಅದರಿಂದ ಆಗುವ ಲಾಭಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು. ಅಂತಹ ಕೆಲವು ಮಾಡಲೇಬಾರದ ಪ್ರಯತ್ನಗಳ ಬಗ್ಗೆ ಹೇಳ್ತೀವಿ ನೋಡಿ.
Weight Loss: ತೂಕ ಕಮ್ಮಿ ಮಾಡ್ಕೋಬೇಕು ಅನ್ನೋ ಕಾರಣಕ್ಕೆ ರಾತ್ರಿ ನಿದ್ರೆ ಮಾಡದೇ ಇರೋದು
ಕೆಲವರಿಗೆ ತಮ್ಮ ದೇಹದ ತೂಕ ಹೆಚ್ಚಿದೆ ಎನ್ನುವ ಕಾರಣಕ್ಕೆ ಅದೇ ಚಿಂತೆಯಲ್ಲಿ ರಾತ್ರಿ ನಿದ್ರೆ ಬಿಡುವ ಅಭ್ಯಾಸ ಇರುತ್ತದೆ. ರಾತ್ರಿಯಿಡೀ ಅದರ ಬಗ್ಗೆ ಚಿಂತಿಸುತ್ತಾ ಕಣ್ಣೀರು ಹಾಕುತ್ತಾ ಕಾಲಕಳೆಯುವವರಿಗೆ ಸಂಶೋಧನೆಗಳ ಪ್ರಕಾರ ಕಹಿಸುದ್ದಿಯೊಂದಿದೆ. ತೂಕ ಹೆಚ್ಚಾಗಲು ಅತ್ಯಂತ ಪ್ರಮುಖ ಕಾರಣವೇ ರಾತ್ರಿ ನಿದ್ರೆ ಮಾಡದೇ ಇರುವುದೇ ಆಗಿದ್ದು, ಈಗಾಗಲೇ ತೂಕ ಜಾಸ್ತಿ ಇರುವವರು ಮತ್ತೆಯೂ ಹೆಚ್ಚು ನಿದ್ರಾಹೀನತ್ರೆಗೆ ಒಳಗಾದಲ್ಲಿ, ಕೇವಲ ತೂಕ ಹೆಚ್ಚಾಗುವುದಷ್ಟೇ ಅಲ್ಲದೇ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಹಾಗೂ ಹೃದಯಾಘಾತ (Heart Attack) ಆಗುವ ಸಂಭವ ಕೂಡ ಇರುತ್ತದೆ.
ಅತಿಯಾದ ಗ್ರೀನ್ ಟೀ ಕುಡಿಯೋದು
ಕೆಲವರು ತಮ್ಮ ತೂಕ ಇಳಿಸಿಕೊಳ್ಳಲು ಖಾಲಿ ಹೊಟ್ಟೆಗೆ ಗ್ರೀನ್ ಟೀ (Green Tea) ಕುಡಿಯೋದು ಅಥವಾ ದಿನಕ್ಕೆ ಅಗತ್ಯಕ್ಕಿಂತ ಹೆಚ್ಚು ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ, ತೂಕ ಇಳಿಸಿಕೊಳ್ಳಲು (Weight Loss) ಮಾಡುವ ಅತಿಯಾದ ಗ್ರೀನ್ ಟೀ ಸೇವನೆ ಕೂಡ ಆರೋಗ್ಯಕ್ಕೆ ಹಾನಿಕರವಾಗಿದ್ದು, ಲಿವರ್ ಹಾಗೂ ಕಿಡ್ನಿಗಳಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಈ ಗ್ರೀನ್ ಟೀನಲ್ಲಿ ಕೆಫೀನ್ ಅಂಶ ಅಧಿಕವಾಗಿರುವ ಕಾರಣ, ನಿದ್ರಾಹೀನತೆ, ಕರುಳಿನ ಸಮಸ್ಯೆ, ರಕ್ತಹೀನತೆ, ಸ್ನಾಯುದೌರ್ಬಲ್ಯ ಮುಂತಾದ ಸಮಸ್ಯೆಗಳು ಉಂಟಾಗುವುದು ಖಂಡಿತ.
Weight Loss ಗೆ ಅತಿಯಾದ ಜಿಮ್ ಮಾಡೋದು
ಇತ್ತೀಚೆಗೆ ಕೆಲವು ರೀಲ್ಸ್ ಗಳ ಮೂಲಕ ಫಿಟ್ನೆಸ್ ಜಿಮ್ಗಳಿಗೆ ಮಾರುಹೋಗಿ, ತೂಕ ಇಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಮಗೆ ಅಗತ್ಯಕ್ಕಿಂತ ಹೆಚ್ಚು ಅಥವಾ ತಮ್ಮ ಸಾಮರ್ಥ್ಯವನ್ನು ಮೀರಿ ಜಿಮ್ ಮಾಡುವ ಹವ್ಯಾಸವನ್ನು ಕೆಲವರು ರೂಢಿಸಿಕೊಂಡಿದ್ದು, ಇದರಿಂದ ದೈಹಿಕ ಆರೋಗ್ಯದ ಮೇಲೆ ಲಾಭಕ್ಕಿಂತ ದುಷ್ಪರಿಣಾಮವೇ ಹೆಚ್ಚು. ಅತಿಯಾಗಿ ಬಿಡುವಿಲ್ಲದೇ ಜಿಮ್ ಮಾಡುವುದರಿಂದ ದೇಹದ ನರಗಳಿಗೆ ಹಾಗೂ ಸ್ನಾಯುಗಳಿಗೆ ರೆಸ್ಟ್ ಇಲ್ಲದೆಯೇ ದೈಹಿಕ ಹಾಗೂ ಮಾನಸಿಕ ಅಸಮತೋಲನ ಉಂಟಾಗುವ ಸಾಧ್ಯತೆಯಿರುತ್ತದೆ. ಅಷ್ಟೇ ಅಲ್ಲದೇ, ದೇಹದ ಅವಶ್ಯಕತೆಗೆ ಮೀರಿ ಸ್ನಾಯುಗಳು ವಿಸ್ತರಣೆಗೊಂಡು, ನರಗಳು ದುರ್ಬಲವಾಗಿ ಏಕಾಏಕಿ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧನೆಗಳು ತಿಳಿಸಿವೆ.
ತೂಕ ಇಳಿಸುವ ಕೆಲವು ಮೆಡಿಸಿನ್ ಅಥವಾ ಡ್ರಗ್ಸ್ ತೆಗೆದುಕೊಳ್ಳೋದು
ಇತ್ತೀಚೆಗೆ ಮಾರುಕಟ್ಟೆಯಲ್ಲಿ ತೂಕ ಇಳಿಸಲು (Weight Loss) ಸುಲಭ ಉಪಾಯಗಳು ಎನ್ನುವ ನೆಲೆಯಲ್ಲಿ ಹಲವು ಪೌಡರ್ಗಳು ಹಾಗೂ ಸಿರಪ್, ಡ್ರಗ್ಸ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಈ ತೂಕ ಇಳಿಸುವ ವಿಧಾನ ಪ್ರಕೃತಿಗೆ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ಮಾರುಕಟ್ಟೆಯ ಪೌಡರ್ಗಳಿಗೆ ಅಥವಾ ತೂಕ ಇಳಿಸುವ ಮೆಡಿಸಿನ್ಗಳಿಗೆ ಮಾರುಹೋಗದಿರುವುದು ಒಳ್ಳೆಯದು. ಮೆಡಿಸಿನ್ಗಳು ಅಥವಾ ಡ್ರಗ್ಸ್ಗಳು ಏಕಾಏಕಿ ದೇಹದ ಹಾರ್ಮೋನ್ಗಳು ಹಾಗೂ ರಕ್ತ ಮತ್ತು ಸ್ನಾಯುಗಳ ಮೇಲೆ ಅಡ್ಡಪರಿಣಾಮ ಬೀರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.
ತೂಕ ಹೆಚ್ಚಾಗಲು (Weight Gain) ಪ್ರಮುಖ ಕಾರಣ ಏನು?
ನಿಮ್ಮ ಆಹಾರದಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರೋಟೀನ್ ಸೇವನೆ, ಅತಿ ಕಡಿಮೆ ಹಣ್ಣು ತರಕಾರಿಗಳು ಹಾಗೂ ವಿಟಮಿನ್ ಯುಕ್ತ ಪೌಷ್ಟಿಕಾಂಶಗಳುಳ್ಳ ಆಹಾರ ಪದಾರ್ಥಗಳ ಸೇವನೆಯ ಕೊರತೆಯಿಂದ ದೇಹ ಸ್ಥೂಲಕಾಯಕ್ಕೆ ತಿರುಗಬಹುದು. ಅಷ್ಟೇ ಅಲ್ಲದೇ, ನಿದ್ರಾಹೀನತೆ, ಅತಿಯಾದ ಆಹಾರ ಸೇವನೆ, ಅದರಲ್ಲೂ ಕೊಲೆಸ್ಟರಾಲ್ ಯುಕ್ತ ಆಹಾರ ಪದಾರ್ಥಗಳ ಅತೀವ ಸೇವನೆ, ಮಾದಕವ್ಯಸನ, ಧೂಮಪಾನ, ಸಕ್ಕರೆಯುಕ್ತ ಆಹಾರಗಳ ಅತೀವ ಸೇವನೆಯಿಂದಾಗಿ ತೂಕ ಇದ್ದಕ್ಕಿದ್ದಂತೆ ಜಾಸ್ತಿಯಾಗುವ ಸಂಭವವಿದ್ದು, ಅಂತಹ ಆಹಾರ ಸೇವನೆ ಹಾಗೂ ತೂಕ ಹೆಚ್ಚಾಗಬಹುದಾದ ಅಂಶಗಳ ಕುರಿತು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ನಿಮ್ಮ ತೂಕ ಕಡಿಮೆಯಿದ್ದರೂ ಕೂಡ, ನೀವು ಆರೋಗ್ಯದಿಂದಿದ್ದರೆ ಯಾವುದೇ ಕಾರಣಕ್ಕೂ ತೂಕ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಬೇಡಿ. ಹಾಗೆಯೇ ತೂಕ ಹೆಚ್ಚಿದ್ದರೂ ಸಾಮಾನ್ಯವಾಗಿ, ಅವಶ್ಯಕತೆಗೆ ತಕ್ಕಂತೆ ಜಿಮ್, ಯೋಗ ಮುಂತಾದ ದೈಹಿಕ ಸದೃಢತೆಗೆ ಸಹಕರಿಸಬಲ್ಲ ಪ್ರಯತ್ನಗಳನ್ನು ಮಾಡುವುದರಿಂದ ನಿಮ್ಮ ದೇಹದ ತೂಕ ಸಮತೋಲನ ಸಾಧ್ಯವಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯಯವಾಗಿದೆ.