ಕಳೆದ 10 ವರ್ಷಗಳಿಂದ ಭಾರತದ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ (Pakistan) ಮೂಲದ ಕುಟುಂಬವನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ನಕಲಿ ಹೆಸರು ಮತ್ತು ನಕಲಿ ದಾಖಲೆಯನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದ ಆರೋಪದ ಮೇಲೆ ಪಾಕಿಸ್ತಾನಿ ಪ್ರಜೆ ಹಾಗೂ ಆತನ ಕುಟುಂಬದ ಮೂವರು ಸದಸ್ಯರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಡಾಕಾದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ (Pakistan) ಕುಟುಂಬ 2014ರಲ್ಲಿ ದೆಹಲಿಗೆ ಬಂದಿತ್ತು. ಅನಂತರ, ಬೆಂಗಳೂರಿಗೆ ಪ್ರಯಾಣಿಸಿ, ಬೆಂಗಳೂರಿನ ಹೊರಹೊಲಯದಲ್ಲಿಯೇ ವಾಸಿಸುತ್ತಿದ್ದರು. ಆರೋಪಿಗಳನ್ನು ರಶೀದ್ ಅಲಿ ಸಿದ್ದಿಕಿ ಅಲಿಯಾಸ ಶಂಕರ್ ಶರ್ಮಾ (48), ಪತ್ನಿ ಆಯೇಷಾ (38) ಮತ್ತು ಆಕೆಯ ಪೋಷಕರಾದ ಹನೀಫ್ ಮೊಹಮ್ಮದ್ (73) ಹಾಗೂ ರುಬೀನಾ (61) ಎಂದು ಗುರುತಿಸಲಾಗಿದೆ.
ಗುಪ್ತಚರ ಅಧಿಕಾರಿಗಳ ಮಾಹಿತಿಯ ಆಧಾರದ ಮೇಲೆ ಭಾನುವಾರದಂದು ಪೊಲೀಸರು ಕಾರ್ಯಾಚರಣೆ ನಡೆಸಿ ಈ ಪಾಕಿಸ್ತಾನಿ ಮೂಲದ (Pakistan) ಕುಟುಂಬವನ್ನು ಬಂಧಿಸಿದೆ. ಜಿಗಣಿಯ ಪೊಲೀಸ್ ಅಧಿಕಾರಿಯು ಅಕ್ರಮವಾಗಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿಯನ್ನು ವಿಚಾರಣೆಯ ನಂತರ ತಿಳಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಜೀವನ ಹೇಗೆ ಸಾಗಿಸುತ್ತಿದ್ದರು? :
ಕಳೆದ 6 ವರ್ಷಗಳಿಂದ ಬೆಂಗಳೂರಿನ ಜಿಗಣಿಯಲ್ಲಿ ನಕಲಿ ದಾಖಲೆಗಳನ್ನು ನೀಡಿ ಬಾಡಿಗೆ ಮನೆಯನ್ನು ವಾಸಕ್ಕೆ ಪಡೆದಿದ್ದರು. ರಶೀದ್ ಅಲಿ ಸಿದ್ದಿಕಿ ಗ್ಯಾರೇಜ್ಗೆ ಸಾಮಗ್ರಿಗಳನ್ನು ಪೂರೈಸುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮೆಹದಿ ಫೌಂಡೇಶನ್ ಇಂಟರ್ನ್ಯಾಷನಲ್ ಜಶ್ನ್-ಎ-ಯೂನಸ್ ಸಂಘಟನೆಗೆ ಸಂಬಂಧಿಸಿದವರೆಂದು ತಿಳಿದುಬಂದಿದೆ. ಮನೆಯ ಗೋಡೆಯ ಮೇಲೆಯೂ ಮೆಹದಿ ಫೌಂಡೇಶನ್ ಇಂಟರ್ನ್ಯಾಷನಲ್ ಜಶ್ನ್-ಎ-ಯೂನಸ್ ಎಂದು ಬರೆಯಲಾಗಿದೆ. ಈ ಕುಟುಂಬಕ್ಕೆ ಸಂಬಂಧಿಸಿದವರು ಡಾಕಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಇಮಿಗ್ರೆಷನ್ ಪರಿಶೀಲನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅನಂತರವೇ, ಸಿದ್ದಿಕಿ ಕುಟುಂಬ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಪೊಲೀಸರಿಗೆ ತಿಳಿದಿದೆ.
ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ. ಅವರ ಜಾಲ ಮತ್ತು ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರವೇ ಮತ್ತಷ್ಟು ಹೆಚ್ಚಿನ ಮಾಹಿತಿ ಕಲೆಹಾಕಲಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪರಾರಿಗೆ ಯತ್ನ :
ಪೊಲೀಸರು ತಮ್ಮನ್ನೇ ಅರಸಿ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ, ಸಿದ್ದಿಕಿ ಕುಟುಂಬ ಗಂಟುಮೂಟೆ ಕಟ್ಟಿಕೊಂಡು ಪರಾರಿಯಾಗಲು ಸಿದ್ಧತೆ ನಡೆಸಿತ್ತು. ಇದೇ ವೇಳೆ ಏಕಾಏಕಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮನೆಯಲ್ಲಿದ್ದ ಆಧಾರ್ ಕಾರ್ಡ್ಗಳು ಹಾಗೂ ಭಾರತೀಯ ಪಾಸ್ಪೋರ್ಟ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನದು ಕರಾಚಿ ಹಾಗೂ ಹೆಂಡತಿಯದ್ದು ಲಾಹೋರ್ ಎಂಬ ಬಗ್ಗೆ ಸಿದ್ದಿಕಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ, 2011 ರಲ್ಲಿ ಇಬ್ಬರೂ ಪೋಷಕರೊಂದಿಗೆ ಡಾಕಾಗೆ ತೆರಳಿದ್ದ ವೇಳೆ ಅಲ್ಲಿಯೇ ವಿವಾಹ ಮಾಡಿಕೊಂಡಿರುವ ಬಗ್ಗೆ ಹೇಳಿದ್ದಾನೆ.