ಆಂಧ್ರದ ತಿರುಪತಿ ಶ್ರೀ ತಿರುಮಲ ಕ್ಷೇತ್ರದ ಮಹಾಪ್ರಸಾದ ಲಡ್ಡು (Tirupati Laddu) ವಿನಲ್ಲಿ ಪ್ರಾಣಿಕೊಬ್ಬು (Animal Fat) ಬಳಸಿದ್ದಾರೆ ಎನ್ನುವ ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿರುವಂತೆಯೇ, ಲಡ್ಡು ವಿವಾದದ ಬಗ್ಗೆ ನೇರಾನೇರ ಹೇಳಿಕೆಗಳೊಂದಿಗೆ ಟ್ರೆಂಡ್ನಲ್ಲಿರುವ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan), ವಿವಾದದ ನಂತರ ಇದೇ ಮೊದಲ ಬಾರಿಗೆ ತಿರುಪತಿ ತಿರುಮಲ ಕ್ಷೇತ್ರ (Tirupati Shri Venkateshwara Temple) ಕ್ಕೆ ಮೆಟ್ಟಿಲು ಹತ್ತುವ ಮೂಲಕ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ತಿರುಪತಿ ಲಡ್ಡು ವಿವಾದದ ಬಗ್ಗೆ ತಮ್ಮ ಪ್ರಾಯಶ್ಚಿತ್ತದಂತೆ 11 ದಿನಗಳ ನಿರಂತರ ವ್ರತ ಕೈಗೊಂಡಿರುವ ನಟ ಹಾಗೂ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಕೊನೆಗೂ ಪಾದಯಾತ್ರೆಯ ಮೂಲಕ ತನ್ನ 11 ದಿನಗಳ ದೀಕ್ಷಾ ವ್ರತ ಕೊನೆಗೊಳಿಸಿದ್ದಾರೆ.
ಕಾವಿ ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದ Pawan Kalyan!
ಕಡು ಕಾವಿ ಬಣ್ಣದ ಪಂಚೆ ಹಾಗೂ ದಿರಿಸು ತೊಟ್ಟು ಕಟ್ಟಾ ಹಿಂದುತ್ವವಾದಿಯಂತೆ ಕಾಣುತ್ತಿದ್ದ ಪವನ್ ಕಲ್ಯಾಣ್, ಕಾಲ್ನಡಿಗೆಯಲ್ಲೇ ತಿರುಪತಿಯ ಮೆಟ್ಟಿಲುಗಳನ್ನು ಹತ್ತಲು ತೀರ್ಮಾನಿಸಿ, ಸತತ ಐದು ಗಂಟೆಗಳ ಕಾಲ ಮೆಟ್ಟಿಲು ಹತ್ತಿ ಶ್ರೀ ತಿಮ್ಮಪ್ಪನ ದರ್ಶನ ಪಡೆದರು. ಮೊದಲು ಮೆಟ್ಟಿಲುಗಳಿಗೆ ನಮಸ್ಕರಿಸಿ, ಅನಂತರ ಮೊಣಕಾಲ ನಮಸ್ಕಾರ ಮಾಡಿದ ನಂತರ, ಸರಿಸುಮಾರು 3,550 ಮೆಟ್ಟಿಲುಗಳುಳ್ಳ ಶ್ರೀ ತಿರುಮಲ ಬೆಟ್ಟವನ್ನು ಹತ್ತಿ, ತನ್ನ ಪ್ರಾಯಶ್ಚಿತ್ತ ದೀಕ್ಷೆಯನ್ನು ಪವನ್ ಕಲ್ಯಾಣ್ ಕೊನೆಗೊಳಿಸಿದರು.
ಪಾದಯಾತ್ರೆಯ ನಡುವೆ, ಅಲ್ಲಲ್ಲಿ ಸ್ಥಾಪಿಸಲಾಗಿರುವ ದೇವರ ಗುಡಿಗಳಿಗೆ ಹಾಗೂ ಮೂರ್ತಿಗಳಿಗೆ ನಮಸ್ಕರಿಸುತ್ತಲೇ ತೆರಳಿದ ಪವನ್ ಕಲ್ಯಾಣ್ (Pawan Kalyan), ಮಾರ್ಗಮಧ್ಯದಲ್ಲೇ ಟಿಟಿಡಿ ಸಂಸ್ಥೆಯ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿ ಎಲ್ಲರ ಮನಗೆದ್ದರು. ಕೇವಲ ಐದು ಗಂಟೆಗಳಲ್ಲಿ ಬೆಟ್ಟ ಹತ್ತಿ, ದೀಕ್ಷೆ ಕೊನೆಗೊಳಿಸಿದ ಪವನ್ ಕಲ್ಯಾಣ್ ಅವರ ಧರ್ಮನಿಷ್ಠೆಯ ಬಗ್ಗೆ ಎಲ್ಲೆಡೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.
ಲಡ್ಡು ವಿವಾದದ ಬಗ್ಗೆ ನೇರಾನೇರ ಹೋರಾಟಕ್ಕಿಳಿದ ಪವನ್ ಕಲ್ಯಾಣ್!
ತಿರುಪತಿ ಲಡ್ಡು ವಿವಾದದ ನಂತರ ದೇವಳದ ಆಡಳಿತ ಮಂಡಳಿ, ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Y S Jagan Mohan Reddy) ಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪವನ್ ಕಲ್ಯಾಣ್, ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಜೊತೆಯಾಗಿ ನಿಲ್ಲಬೇಕಿದೆ ಎಂದು ಹಿಂದೂ ಸಮಾಜದಲ್ಲಿ ಜಾಗೃತಿ ಹುಟ್ಟಿಸಿದ್ದರು. ಅಷ್ಟೇ ಅಲ್ಲದೇ, ಈ ಲಡ್ಡು ವಿವಾದದ ಬಗ್ಗೆ ತನಗೆ ಸಂಬಂಧವಿಲ್ಲ ಎನ್ನುವಂತೆ ಉಡಾಫೆಯ ಉತ್ತರ ನೀಡಿದ್ದ ತಮಿಳಿನ ನಟ ಕಾರ್ತಿ (Karthi) ಅವರಿಗೂ ನೇರ ಉತ್ತರ ನೀಡಿದ್ದ ಪವನ್ ಕಲ್ಯಾಣ್ (Pawan Kalyan), ಧರ್ಮದ ರಕ್ಷಣೆಯ ಬಗ್ಗೆ ಮಾತನಾಡದೇ ಇರುವುದು ಬಹಳ ದೊಡ್ಡ ತಪ್ಪು ಎಂದು ಕಾರ್ತಿ ಅವರಿಗೆ ನೇರವಾಗಿ ಚಾಟಿ ಬೀಸಿದ್ದರು. ಇದಾದ ನಂತರ ಕಾರ್ತಿ, ಪವನ್ ಕಲ್ಯಾಣ್ ಅವರಲ್ಲಿ ಕ್ಷಮೆಯನ್ನು ಕೂಡ ಕೇಳಿದ್ದಾರೆ.
ಹನುಮಂತನ ಧ್ವಜವನ್ನೇ ಹಿಡಿದು ಕೊನೆಯವರೆಗೂ ಒಂದೇ ವೇಗದಲ್ಲಿ ಮೆಟ್ಟಿಲು ಹತ್ತಿ ತಿಮ್ಮಪ್ಪ ಸನ್ನಿಧಾನದಲ್ಲಿ ದರ್ಶನ ಪಡೆದ ಪವನ್ ಕಲ್ಯಾಣ್ ಅವರನ್ನು ನೋಡಲು ಅಪಾರ ಜನಸಮೂಹವೇ ಸೇರಿತ್ತು. ಆರಂಭದಿಂದ ಕೊನೆಯವರೆಗೂ ಪವನ್ ಕಲ್ಯಾಣ್ ಅವರ ಬಾಡಿಗಾರ್ಡ್ಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪವನ್ ಕಲ್ಯಾಣ್ ಅವರೊಂದಿಗೇ ಮೆಟ್ಟಿಲಿನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.