ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದಾದರೂ ಸಂತೋಷವನ್ನು ಆಚರಿಸಲು, ಬರ್ತ್ಡೇ ಆಚರಿಸಲು ಕೇಕ್ ಕಟ್ ಮಾಡಿ ಸಂಭ್ರಮಿಸುವುದೇ ಕೆಲವರಿಗೆ ಒಂದು ರೀತಿಯ ಆನಂದ. ಶಾಲಾ ಮಕ್ಕಳು, ಹೆಣ್ಣುಮಕ್ಕಳಿಗಂತೂ ಕೇಕ್ ತಿನ್ನುವದೆಂದರೆ ಪ್ರಾಣ. ಅಂತಹ ಕೇಕ್ ಪ್ರಿಯರಿಗೆ ಕೇಕ್ ಕಲರ್ (Cake Color Dangers) ಬಗ್ಗೆ ರಾಷ್ಟ್ರೀಯ ಆಹಾರ ಗುಣಮಟ್ಟ ಸುರಕ್ಷತಾ ಪ್ರಾಧಿಕಾರ (FSSAI) ಶಾಕ್ ನೀಡಿದೆ.
ಹೌದು. ರಾಷ್ಟ್ರೀಯ ಆಹಾರ ಗುಣಮಟ್ಟ ಸುರಕ್ಷತಾ ಪ್ರಾಧಿಕಾರವು ಬೆಂಗಳೂರಿನ ಕೆಲವು ಬೇಕರಿಗಳಲ್ಲಿ ತಯಾರಿಸುವ ಕೇಕ್ ಅನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದು, ಆ ಪರೀಕ್ಷೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕೇಕ್ ಗುಣಮಟ್ಟ ಪರೀಕ್ಷೆಯಲ್ಲಿ ಪತ್ತೆಯಾದ ಆ ಆಘಾತಕಾರಿ ಅಂಶ ಯಾವುದು? ಅದರಿಂದ ಉಂಟಾಗುವ ದುಷ್ಪರಿಣಾಮ ಏನು? ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.
Cake Color Dangers: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಕಬಾಬ್ ಪಟ್ಟಿಗೆ ಕೇಕ್ ಸೇರ್ಪಡೆ
ಇತ್ತೀಚೆಗಷ್ಟೇ ರಾಜ್ಯದಲ್ಲಿ ಭರ್ಜರಿಯಾಗಿ ಸೇಲ್ ಆಗುತ್ತಿದ್ದ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಬಳಸಲಾಗುತ್ತಿದ್ದ ಕಲರ್ನಲ್ಲಿ ಕ್ಯಾನ್ಸರ್ಕಾರಕ ಅಂಶ ಅಂಶ ಪತ್ತೆಯಾಗಿತ್ತು. ಅದರ ನಂತರ ರಾಜ್ಯದಾದ್ಯಂತ ಅದರ ಬಳಕೆಯನ್ನು ನಿಷೇಧಿಸಿದ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರಂತರವಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿ ಆಹಾರ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ನಡೆಸುತ್ತಿದೆ. ಇದೀಗ, ಬೆಂಗಳೂರಿನ 12 ವಿವಿಧ ಬೇಕರಿಗಳಲ್ಲಿ ಕೇಕ್ಗಳ ಸ್ಯಾಂಪಲ್ಗಳನ್ನು ಟೆಸ್ಟ್ಗೆ ಒಳಪಡಿಸಿದಾಗ, ಅವುಗಳಲ್ಲಿ ಕ್ಯಾನ್ಸರ್ಕಾರಕ ಅಂಶ (Cake Color Dangers) ಇರೋದು ಪತ್ತೆಯಾಗಿದೆ.
ಬಹುತೇಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೇಲ್ ಆಗುವ ಕೇಕ್ ರೆಡ್ ವೆಲ್ವೆಟ್ (Red Velvet) ಹಾಗೂ ಬ್ಲ್ಯಾಕ್ ಫಾರೆಸ್ಟ್ (Black Forest). ಎಲ್ಲರಿಗೂ ಪ್ರಿಯವಾಗಿರುವ ಹಾಗೂ ರುಚಿಕರವಾಗಿರುವ ಈ ಕೇಕ್, ತಿನ್ನುವಾಗ ಸಖತ್ ಆಗಿ ಮಜಾ ಕೊಡುತ್ತೆ. ಆದರೆ ಅತ್ಯಂತ ಆಘಾತಕಾರಿ ಅಂಶ ಏನೆಂದರೆ, ಈ ಕೇಕ್ಗಳಲ್ಲೇ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿರುವುದರ ಬಗ್ಗೆ ವರದಿಗಳು ಹೊರಬಿದ್ದಿದ್ದು, ಬೆಂಗಳೂರಿನ ಕೇಕ್ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ.
ಯಾವ ಕೇಕ್ನಲ್ಲಿ ಕ್ಯಾನ್ಸರ್ಕಾರಕ ಅಂಶ!?
ರೆಡ್ ವೆಲ್ವೆಟ್ ಹಾಗೂ ಬ್ಲ್ಯಾಕ್ ಫಾರೆಸ್ಟ್ ಕೇಕ್ಗಳಲ್ಲಿ ಸನ್ಸೆಟ್ ಯೆಲ್ಲೋ ಎಫ್ಸಿಎಫ್, ಪೋನ್ಕೂ 4ಆರ್, ಟಾರ್ಟ್ರಾಜೈನ್ ಈ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಎಲ್ಲಾ ಅಂಶಗಳು (Cake Color Dangers) ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತವೆ ಎಂದು ಪರೀಕ್ಷೆಗಳಿಂದ ತಿಳಿದುಬಂದಿದೆ. ಈ ಬಗ್ಗೆ ಅಪ್ಡೆತ್ ನೀಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಇಂತಹ ಹಾನಿಕಾರಕ ಅಂಶಗಳನ್ನು ಕೇಕ್ ತಯಾರಿಕೆಯಲ್ಲಿ ಬಹುತೇಕ ಬಳಸಲಾಗುತ್ತಿದ್ದು, ಕ್ಯಾನ್ಸರ್ ಕಾಯಿಲೆ ಆರಂಭವಾಗಲು ಇವು ಅತ್ಯಂತ ಹೆಚ್ಚು ಕಾರಣಗಳಾಗಿವೆ ಎಂದಿದೆ.
ವರದಿ ಬಂದ ಕೂಡಲೇ ಎಚ್ಚೆತ್ತ ಸರ್ಕಾರ!
ಈಗಾಗಲೇ ಈ ವರದಿ ಬಂದ ತಕ್ಷಣ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇಂತಹ ಕ್ಯಾನ್ಸರ್ಕಾರಕ ಅಂಶಗಳನ್ನು ಅಥವಾ ಬಣ್ಣಗಳನ್ನು ಕೇಕ್ ತಯಾರಿಕೆಯಲ್ಲಿ ಅಥವಾ ಯಾವುದೇ ಬೇಕರಿ ಫುಡ್ಗಳಲ್ಲಿ ಬಳಸದಂತೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಈ ರಾಸಾಯನಿಕಗಳನ್ನು ಬಳಸಿದಲ್ಲಿ ಅಥವಾ ಬಳಸಿದ್ದು ದೃಢವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.
ಈಗಾಗಲೇ ಕಬಾಬ್, ಗೋಬಿ ಹಾಗೂ ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ಕ್ಯಾನ್ಸರ್ಕಾರಕ ಕಲರ್ ಹಾಗೂ ಇತರ ನಿಷೇಧಿತ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅದರೊಂದಿಗೆ ಬಿರಿಯಾನಿ ಹಾಗೂ ಇತರ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತಿದ್ದ ಅಜಿನೊಮೋಟೋ ದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಹಾರ ಪದಾರ್ಥಗಳು ರುಚಿ ಬರಲಿ ಎನ್ನುವ ಕಾರಣಕ್ಕೆ ಕೃತಕ ರಾಸಾಯನಿಕಗಳನ್ನು ಬಳಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಎಲ್ಲಾ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮಾರ್ಗಸೂಚಿಯನ್ನು ರೂಪಿಸಿದೆ ಎನ್ನಲಾಗಿದೆ.
ಒಟ್ಟಾರೆ, ಈ ಎಲಾ ಪರೀಕ್ಷಾ ವರದಿಗಳ ನಂತರ, ಹೋಟೆಲ್, ರೆಸ್ಟೋರೆಂಟ್ ಹಾಗೂ ಕೇಕ್ ಶಾಪ್ಗಳಲ್ಲಿ ಆಹಾರ ತಿನ್ನುವ ಮೊದಲು ಅದರ ಗುಣಮಟ್ಟ ದೃಢೀಕರಣದ ಬಗ್ಗೆ ತಿಳಿದುಕೊಳ್ಳುವುದು ಒಳಿತು. ಇಲ್ಲವಾದಲ್ಲಿ, ನಿಮ್ಮ ಅಥವಾ ನಿಮ್ಮ ಮಕ್ಕಳ, ಆತ್ಮೀಯರ ಹಾಗೂ ಕುಟುಂಬದವರ ಹೊಟ್ಟೆ ಹಾಳಾಗುವುದಲ್ಲದೇ, ಆರೋಗ್ಯದಲ್ಲಿ ಸಂಪೂರ್ಣ ಏರುಪೇರಿನೊಂದಿಗೆ ಕ್ಯಾನ್ಸರ್ ಕೂಡ ವಕ್ಕರಿಸಿಕೊಳ್ಳುವ ಸಂಭವವಂತೂ ಖಂಡಿತಾ.