ಭಾರತದ ಬಹುದಿನದ ಹಾಗೂ ಏಕೈಕ ಸರ್ಕಾರಿ ಒಡೆತನದ ಟೆಲಿಕಾಂ ಕಂಪೆನಿ ಬಿಎಸ್ಎನ್ಎಲ್ (BSNL) ಕಳೆದ ಎರಡ್ಮೂರು ತಿಂಗಳುಗಳಿಂದ ಗ್ರಾಹಕರ ಮೆಚ್ಚಿನ ಟೆಲಿಕಾಂ ಎಂಬ ಕೀರ್ತಿಗೆ ಭಾಜನವಾಗುತ್ತಿದೆ. ಖಾಸಗಿ ಟೆಲಿಕಾಂ ಕಂಪೆನಿಗಳ ಬೆಲೆ ಏರಿಕೆಯಿಂದ ಬಸವಳಿದಿರುವ ಗ್ರಾಹಕರು ಸರ್ಕಾರಿ ಸಂಸ್ಥೆಯ ಟೆಲಿಕಾಂನ ಸೇವೆಗಾಗಿ ಅನುದಿನವೂ ಕಾಯುತ್ತಿದ್ದಾರೆ.
ಬಿಎಸ್ಎನ್ಎಲ್ ಕಂಪೆನಿ ಡಾಟಾ ಕೇಂದ್ರ ಆರಂಭಿಸಲು ಟಾಟಾ ಸಂಸ್ಥೆಯ 15 ಸಾವಿರ ಕೋಟಿ ರೂ. ಒಪ್ಪಂದದ ನಂತರ ದೇಶದ ಜನತೆ ಬಿಎಸ್ಎನ್ಎಲ್ (BSNL) ಪುನರುಜ್ಜೀವನಕ್ಕಾಗಿ ಕಾದು ಕುಳಿತಿದ್ದಾರೆ. ಕೇಂದ್ರ ಸರ್ಕಾರವೂ ಬಿಎಸ್ಎನ್ಎಲ್ ಗಾಗಿ 6 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ, ಬಿಎಸ್ಎನ್ಎಲ್ ಸಂಸ್ಥೆಯ ಕಡಿಮೆ ದರದ ರೀಚಾರ್ಜ್ ಪ್ಲಾನ್ʼಗಳಿಂದಾಗಿ ವಿವಿಧ ಟೆಲಿಕಾಂ ಕಂಪೆನಿಗಳ ಗ್ರಾಹಕರು ಪೋರ್ಟ್ ಆಗುತ್ತಿದ್ದಾರೆ. ಪ್ರತಿದಿನವೂ ಹೊಸ ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡುತ್ತಿದ್ದಾರೆ ಎನ್ನುವುದಕ್ಕೆ ಜುಲೈ ಮತ್ತು ಆಸಗ್ಟ್ ತಿಂಗಳಲ್ಲಿ 1.75 ಲಕ್ಷ ನೂತನ ಬಳಕೆದಾರರು ಒಳ ಬಂದಿರುವುದೇ ಸಾಕ್ಷಿಯಾಗಿದೆ. ಬಿಎಸ್ಎನ್ಎಲ್ ಈಗಾಗಲೇ ಅತೀ ವೇಗವಾಗಿ 4ಜಿ ನೆಟ್ ವರ್ಕ್ʼಗೆ ಬದಲಾಗುತ್ತಿದೆ. ಏಪ್ರಿಲ್ʼನಿಂದಲೇ 4ಜಿ ಬಿಟಿಎಸ್ ಅಳವಡಿಕೆ ಕಾರ್ಯವನ್ನು ಕಂಪೆನಿ ಆರಂಭಿಸಿತ್ತು. ಅದರಂತೆ ಈಗಾಗಲೇ ದೇಶಾದ್ಯಂತ 1 ಲಕ್ಷ 4ಜಿ ಟವರ್ʼಗಳನ್ನು ಅಳವಡಿಸಲಾಗಿದೆ. ಅತೀ ಶೀಘ್ರದಲ್ಲಿಯೇ 5ಜಿ ನೆಟ್ ವರ್ಕ್ ಅನ್ನೂ ಲಾಂಚ್ ಮಾಡುವ ಸಿದ್ಧತೆಯಲ್ಲಿಯೂ ಸಂಸ್ಥೆ ಇದೆ.
ಈ ಕಾರಣದಿಂದಾಗಿ ಬಿಎಸ್ಎನ್ಎಲ್ ಕಡೆಗೆ ಮುಖ ಮಾಡಿರುವ ಬಳಕೆದಾರರ ಪ್ರಮಾಣ ಹೆಚ್ಚುತ್ತಲೇ ಇದೆ. ಆದಾಗ್ಯೂ, ಬಿಎಸ್ಎನ್ಎಲ್ ಸಂಸ್ಥೆಯ ಮಾರಾಟ ವಿಭಾಗದ ತಳಮಟ್ಟದಲ್ಲಿನ ಅಲಭ್ಯತೆಯಿಂದ ಸಾಕಷ್ಟು ಜನತೆಗೆ ಸಿಮ್ ಖರೀದಿ ಹಾಗೂ ಪೋರ್ಟ್ ಮಾಡಿಸಿಕೊಳ್ಳುವಲ್ಲಿಯೂ ಸಮಸ್ಯೆಗಳು ಕಂಡು ಬರುತ್ತಿವೆ.
BSNL ಗೆ ಎರಡೇ ತಿಂಗಳಲ್ಲಿ ಬೃಹತ್ ಸಂಖ್ಯೆಯ ಬಳಕೆದಾರರ ಆಗಮನ
ಬಿಎಸ್ಎನ್ಎಲ್ (BSNL) ಸಂಸ್ಥೆ ಅಧಿಕೃತವಾಗಿ ನೀಡಿರುವ ಮಾಹಿತಿಯ ಪ್ರಕಾರ, ಪೋರ್ಟಿಲಿಟಿಯ ಎಂಎನ್ʼಪಿ ಮೂಲಕ ಜುಲೈ ತಿಂಗಳಲ್ಲಿ 25,755 ಜನ ಬಳಕೆದಾರರು ಹಾಗೂ ಆಗಸ್ಟ್ ತಿಂಗಳಲ್ಲಿ 44,886 ಜನ ಬಳಕೆದಾರರು ವಿವಿಧ ಟೆಲಿಕಾಂ ಕಂಪೆನಿಗಳಿಂದ ಬಿಎಸ್ಎನ್ಎಲ್ ಗೆ ಬಂದಿದ್ದಾರೆ. ಅಲ್ಲದೇ, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 66,321 ಹಾಗೂ 1,00,487 ಜನ ನೂತನ ಬಳಕೆದಾರರು ಬಿಎಸ್ಎನ್ಎಲ್ ಸಿಮ್ ಖರೀದಿಸಿದ್ದಾರೆ.
ಜೂನ್ ತಿಂಗಳಲ್ಲಿ ಟೆಲಿಕಾಂ ಬೆಲೆ ಹೆಚ್ಚಳದ ನಂತರ ಏರ್ʼಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳು ಶೇ.20 ರಷ್ಡು ಬೆಲೆ ಹೆಚ್ಚಳ ಮಾಡಿದ್ದವು. ಈ ಬೆಲೆ ಹೆಚ್ಚಳದ ಬಗ್ಗೆ ದೇಶಾದ್ಯಂತ ಆಕ್ರೋಶವೂ ಹುಟ್ಟಿಕೊಂಡಿತ್ತು. ಈ ಪರಿಣಾಮವಾಗಿ ಜೂನ್ ತಿಂಗಳಲ್ಲಿ 10 ಸಾವಿರ ನೂತನ ಬಳಕೆದಾರರು ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡಿದ್ದರು.
ಖಾಸಗಿ ಕಂಪೆನಿಗಳಿಗಿಂತ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಸಂಸ್ಥೆಯ ರೀಚಾರ್ಜ್ ಬೆಲೆಗಳು (BSNL Recharge Plans) ಶೇ.25 ರಿಂದ ಶೇ.40 ರಷ್ಟು ಕಡಿಮೆಯಿರುವುದು ಜನತೆಗೆ ಲಾಭವಾಗಿದೆ.