ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಇಂದು ತಿರಸ್ಕರಿಸಿ ಆದೇಶ ಹೊರಡಿಸಿದೆ. ಆ ಮೂಲಕ ಮುಡಾ ಹಗರಣ (MUDA Case) ದಲ್ಲಿ ಸಿಎಂ ಸಿದ್ದರಾಮಯ್ಯನವರ (CM Siddaramaiah) ವಿರುದ್ಧದ ವಿಚಾರಣೆಗೆ ಅಸ್ತು ಎಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣ (MUDA Case)ಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಕರಣ ದಾಖಲಿಸಲು 17 ಎ ಅಡಿ ಅನುಮತಿ ನೀಡುವಂತೆ ಸ್ನೇಹಮಯಿ ಕೃಷ್ಣ ಸೇರಿದಂತೆ ಮತ್ತಿಬ್ಬರು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಒಪ್ಪಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರು 17 ಎ ಅಡಿ ದೂರು ದಾಖಲಿಸಲು ಅನುಮತಿ ನೀಡಿದ್ದರು. ರಾಜ್ಯಪಾಲರ ಈ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ :
ನ್ಯಾ. ನಾಗಪ್ರಸನ್ನ ಅವರ ಪೀಠದ ಆದೇಶದಿಂದ ಸಿದ್ದರಾಮಯ್ಯನವರಿಗೆ ಸಂಕಷ್ಟ ಶುರುವಾಗಿದೆ. ಮುಡಾ ಅಕ್ರಮ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿಎಂ ಸಿದ್ದರಾಮಯ್ಯನವರ ಹಸ್ತಕ್ಷೇಪ ಇದ್ದಂತಿದೆ ಎನ್ನುವ ತೀರ್ಮಾನವನ್ನು ಹೈಕೋರ್ಟ್ ಹೊರಹಾಕಿದೆ. ಸಿದ್ದರಾಮಯ್ಯನವರ ಸಿಎಂ ಸ್ಥಾನದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ದೂರುದಾರರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಕರಣ ದಾಖಲಿಸಿದರೆ, ಇದರ ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ.
ಸಿದ್ದರಾಮಯ್ಯರ ಮುಂದಿನ ನಡೆಯೇನು?
ಸಿಎಂ ಸಿದ್ದರಾಮಯ್ಯನವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಸುಪ್ರೀಂಕೋರ್ಟ್ನಲ್ಲಿ ವಾದ ವಿವಾದಗಳ ನಂತರ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದರೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ನೀಡಲೇಬೇಕಾಗುತ್ತದೆ. ಒಂದು ವೇಳೆ ಸುಪ್ರಿಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದರೆ, ಸಿಎಂ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆಯಲು ಕಾನೂನಿಗೆ ಬೆಂಬಲ ಸಿಕ್ಕಂತಾಗುತ್ತದೆ.
Muda Case: ಏನಿದು ಪ್ರಕರಣ?
ಸಿಎಂ ಸಿದ್ದರಾಮಯ್ಯನವರ (CM Siddaramaiah) ಪತ್ನಿ ಪಾರ್ವತಿಯವರ ಕೆಸರೆ ಗ್ರಾಮದಲ್ಲಿನ ಭೂಮಿಗೆ ಬದಲಾಗಿ, ಮುಡಾವು ಮೈಸೂರಿನ ಪ್ರತಿಷ್ಠಿತ ವಿಜಯನಗರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಈ ನಿವೇಶನಗಳ ಒಟ್ಟು ಬೆಲೆ 67 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜಮೀನಿನ ಮೌಲ್ಯ ಹಾಗೂ ನಿವೇಶನಗಳ ಮೌಲ್ಯದಲ್ಲಿ ಅಜಗಜಾಂತರ ವ್ಯತ್ಯಾಸವಾದ್ದರಿಂದ ಅಕ್ರಮ ನಡೆದಿದೆ ಎಂದು ಬಿಜೆಪಿ ದೂರು ದಾಖಲಿಸಿತ್ತು. ಅಲ್ಲದೇ, ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿ ಪ್ರಕರಣ ದಾಖಲಿಸಿತ್ತು.
ವಿಸ್ತೃತ ವಾದ ಆಲಿಸಿದ ನ್ಯಾ. ನಾಗಪ್ರಸನ್ನ ರವರ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡಿ ರಾಜ್ಯಪಾಲರ ಆದೇಶ ಎತ್ತಿಹಿಡಿದಿದೆ.
ರಾಜಕೀಯ, ಸಿನೆಮಾ, ಕ್ರೀಡೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ರಾಜ್ಯ, ದೇಶ ಹಾಗೂ ವಿದೇಶದ ಪ್ರತಿ ಕ್ಷಣದ ಸುದ್ದಿಗಳಿಗಾಗಿ ಕರ್ನಾಟಕ ಡೈಲಿ ಜಾಲತಾಣವನ್ನು ತಪ್ಪದೇ ವೀಕ್ಷಿಸುತ್ತಿರಿ.