ಕಳೆದ ಹಲವು ವರ್ಷಗಳಿಂದ ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಭುಗಿಲೆದ್ದಿರುವ ವಿವಾದಗಳು ಒಂದೆರಡಲ್ಲ. ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ, ಎಂಇಎಸ್ ಪುಂಡರ ಹಿಂಸಾಚಾರ ಮುಂತಾದ ದಳ್ಳುರಿಗೆ ಗಡಿಜಿಲ್ಲೆ ಭಾಗಶಃ ಶಾಂತಿಯನ್ನು ಕಳೆದುಕೊಂಡಿದೆ. ಅದಕ್ಕೆ ಮತ್ತೊಂದು ವಿವಾದವೂ ಸೇರ್ಪಡೆಗೊಂಡಿದ್ದು, ಬೆಳಗಾವಿ (Belagavi) ಜಿಲ್ಲೆಯನ್ನು ವಿಭಜನೆ ಮಾಡಬೇಕೆಂಬ ಕೂಗಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮತ್ತೆ ತುಪ್ಪ ಸುರಿದಿದ್ದಾರೆ.
ಹೌದು. ಕರ್ನಾಟಕದ ವಾಯುವ್ಯ ಭಾಗದ ಗಡಿಜಿಲ್ಲೆಯಾದ ಬೆಳಗಾವಿ, ನೆರೆಯ ರಾಜ್ಯವಾದ ಮಹಾರಾಷ್ಟ್ರದೊಂದಿಗೆ ಬಹುಪಾಲು ಗಡಿಭಾಗ ಹಾಗೂ ಗೋವಾದೊಂದಿಗೆ ಸ್ವಲ್ಪ ಗಡಿಭಾಗವನ್ನು ಹೊಂದಿದೆ. ಕರ್ನಾಟಕ ಏಕೀಕರಣವಾದಾಗಿನಿಂದ ಸೃಷ್ಟಿಯಾಗಿದ್ದ ಗಡಿ ವಿವಾದ, ಇದುವರೆಗೂ ಉಭಯ ರಾಜ್ಯಗಳ ನಡುವೆ ಬಗೆಹರಿದಿಲ್ಲ. ಆದರೂ, ಬೆಳಗಾವಿಯ ಒಂದಿಂಚು ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಕರ್ನಾಟಕ ಸಿದ್ಧವಿಲ್ಲ ಎನ್ನುವಂತೆ, ಗಡಿಭಾಗದಲ್ಲಿ ಸದಾ ಒಂದಿಲ್ಲೊಂದು ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡರು ಕನ್ನಡಿಗರಿಗೆ ಅನ್ಯಾಯ ಆಗುವಂತೆ ಹಿಂಸಾಚಾರ, ಆಸ್ತಿಪಾಸ್ತಿ ನಾಶ, ಕಲ್ಲುತೂರಾಟ ಮುಂತಾದ ರೀತಿಗಳಲ್ಲಿ ಸಮಸ್ಯೆ ಹುಟ್ಟಿಸುತ್ತಿರುತ್ತಾರೆ. ಅಂತಹ ಪ್ರಯತ್ನಗಳನ್ನು ಸದಾ ಕರ್ನಾಟಕ ಸರ್ಕಾರ ಹತ್ತಿಕ್ಕಿದೆ.
ಆದರೆ, ಇತ್ತೀಚೆಗೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ಹೊಸತೊಂದು ಕೂಗು ಕೇಳಿಬರುತ್ತಿದ್ದು, ಬಹಳ ವಿಸ್ತಾರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎನ್ನುವ ಒತ್ತಾಯವನ್ನು ಅಲ್ಲಲ್ಲಿ ಕೆಲವು ಭಾಗದ ಸಂಘಟನೆಗಳು, ರಾಜಕೀಯ ನಾಯಕರು ನಡೆಸುತ್ತಿದ್ದಾರೆ. ಆದರೆ, ಅದರ ಬಗ್ಗೆ ಯಾವುದೇ ರೀತಿಯ ನಿರ್ಧಾರಗಳು ಈವರೆಗೆ ನಡೆಯದಿದ್ದರೂ, ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಹೇಳಿಕೆ, ಜಿಲ್ಲೆಯ ವಿಭಜನೆಯ ಕೂಗಿಗೆ ಮತ್ತಷ್ಟು ಬೆಂಕಿ ಹಚ್ಚಿದೆ.
Belagavi District ವಿಭಜನೆ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು?
ಬೆಳಗಾವಿಯಲ್ಲಿ ಮಾತನಾಡುತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂಬ ಕೂಗಿಗೆ ಪ್ರತಿಕ್ರಿಯಿಸುತ್ತಾ, ಭೌಗೋಳಿಕವಾಗಿ ಹಾಗೂ ಜನಸಂಖ್ಯೆ ದೃಷ್ಟಿಯಿಂದ ಬಹುದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸದೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಬಗ್ಗೆ ಶಾಸಾಕರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ದಸರಾ ಹಬ್ಬದ ನಂತರ ಮುಖ್ಯಮಂತ್ರಿಯವರಿಗೆ ಹಾಗೂ ಕಂದಾಯ ಸಚಿವರಿಗೆ ಪತ್ರ ನೀಡುತ್ತೇನೆ ಎಂದು ಹೇಳಿಕೆ ನೀಡಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ.
ಯಾವ ಪ್ರದೇಶವನ್ನು ಹೊಸ ಜಿಲ್ಲೆ ಮಾಡಬೇಕೆಂದು ನನಗೆ ಹೇಳಲು ಸಾಧ್ಯವಿಲ್ಲ. ಆದರೆ, ಬೆಳಗಾವಿಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಲೇಬೇಕಿದ್ದು, ಅದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಜಿಲ್ಲೆಯ ವಿಭಜನೆಯ ಕೂಗಿನೊಂದಿಗೆ ಇತರ ಜಿಲ್ಲೆಗಳಲ್ಲೂ ವಿಭಜನೆಗೆ ಆಸ್ಪದ ನೀಡಬೇಕು ಎನ್ನುವ ಹೊಸ ಚರ್ಚೆಗೆ ಆಸ್ಪದ ನೀಡಿದಂತಾಗಿದೆ.
ಈ ಗಡಿಜಿಲ್ಲೆಗಳಲ್ಲೂ ಇದೆ ವಿಭಜನೆ ಕೂಗು!!
ಈಗಾಗಲೇ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೇಳಿಬರುತ್ತಿರುವ ಭಾಷಾವಾರು ಜಿಲ್ಲಾ ವಿಭಜನೆ ಹಾಗೂ ಪ್ರತ್ಯೇಕ ರಾಜ್ಯದ ಕೂಗಿನಂತೆ, ಗಡಿಜಿಲ್ಲೆಗಳಲ್ಲಿ ಭಾಷಾವಾರು ವಿಂಗಡನೆಗೆ ಕಳೆದ ಹಲವು ವರ್ಷಗಳಿಂದಲೇ ಕೂದು ಬಲವಾಗಿ ಕೇಳಿಬರುತ್ತಿತ್ತು. ಕಾರವಾರ ಭಾಗದ ಕೊಂಕಣಿ ಭಾಷಿಗರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಭಾಗದ ತೆಲುಗು ಭಾಷಿಗರು, ಆನೇಕಲ್ ಭಾಗದ ತಮಿಳು ಭಾಷಿಗರು ತಮಗಾಗಿ ಪ್ರತ್ಯೇಕ ಜಿಲ್ಲೆ ಅಥವಾ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿರುವಂತೆಯೇ, ರಾಜ್ಯದ ಬಹುತೇಕ ಗಡಿಭಾಗಗಳಲ್ಲಿ ಸ್ಥಳೀಯ ಕನ್ನಡ ಭಾಷೆಗಿಂತ ಗಡಿರಾಜ್ಯದ ಭಾಷೆಗಳೇ ಹೆಚ್ಚು ಬಳಕೆಯಾದಂತೆ ಕಾಣುತ್ತಿವೆ.
ಪ್ರತ್ಯೇಕ ಜಿಲ್ಲೆಗಳ ಕೂಗಿನ ನಡುವೆ, ಈಗಾಗಲೇ ಭುಗಿಲೆದ್ದಿರುವ ಪ್ರತ್ಯೇಕ ಸ್ಥಾನಮಾನದ ಬೇಡಿಕೆ ಹಾಗೂ ಭಾಷಾವಾರು ವಿಂಗಡನೆಯ ಕೂಗಿನಲ್ಲಿ, ಏಕೀಕೃತ ಕರ್ನಾಟಕ ತುಂಡು ತುಂಡಾಗಿ ಹಂಚಿ ಹೋಗುವ ಭಯವೂ ಎದುರಾಗಿದ್ದು, ಗಡಿ ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರ ಬಹಳ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಈ ಬೆಳಗಾವಿ ಜಿಲ್ಲೆಯ ವಿಭಜನೆಯ ಹೇಳಿಕೆ ಮತ್ತಷ್ಟು ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರಿ ವಲಯದಿಂದಲೇ ಕಿಚ್ಚು ಹೆಚ್ಚಾಗಿರುವುದು ಖಂಡನೀಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.