ರೈತರು ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬ್ಯಾಂಕುಗಳು ನೀಡಿದ್ದ 2 ಲಕ್ಷ ರೂ.ವರೆಗಿನ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 1,76,977 ಜನ ರೈತರು ಕೃಷಿ ಚಟುವಟಿಕೆಗಳಿಗಾಗಿ ಮಾಡಿದ್ದ ಬರೋಬ್ಬರಿ 400.66 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವುದಾಗಿ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ (Hemanth Soren) ಘೋಷಣೆ ಮಾಡಿದ್ದಾರೆ.
ರೈತರಿಗೆ ಚುನಾವಣಾ ಭರವಸೆಯಾಗಿ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ (JMM) ಘೋಷಣೆ ಮಾಡಿತ್ತು. ಇದೀಗ, ಚುನಾವಣಾ ಆರಂಭಕ್ಕೂ ಮುಂಚೆಯೇ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿ (Agriculture Loan Waiver) ಆದೇಶಿಸಲಾಗಿದೆ. ಪಕ್ಷ ನೀಡಿರುವ ಹಲವು ಭರವಸೆಗಳಲ್ಲಿ ಇದು ಪ್ರಥಮ ಭರವಸೆಯಾಗಿದೆ.
ಕಳೆದ ರಕ್ಷಾ ಬಂಧನದ ಸಮಯದಲ್ಲಿ ಜೆಎಂಎಂ (Jharkhand Mukti Morcha) ಸರ್ಕಾರ ಮಯ್ಯಾ ಸಮ್ಮಾನ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಂತೆ ರಾಜ್ಯದ 48 ಲಕ್ಷ ಮಹಿಳೆಯರಿಗೆ ಮಾಸಿಕ 1,000 ರೂ.ಗಳನ್ನು ನೇರ ವರ್ಗಾವಣೆ ಮಾಡುತ್ತಿತ್ತು. ಇದೀಗ, ಚುನಾವಣೆ ಸಂದರ್ಭದಲ್ಲಿ ಬಾಕಿಯಿದ್ದ ಹಣವನ್ನು ಬಿಡುಗಡೆ ಮಾಡಿದೆ. ಹಾಗೆಯೇ, 200 ಯೂನಿಟ್ ಗಳವರೆಗೆ ಉಚಿತ ಉಚಿತ ವಿದ್ಯುತ್ ಅನ್ನೂ ನೀಡುತ್ತಿದೆ.
ಸಾಲ ಮನ್ನಾ ಘೋಷಿಸಿದ ಸಿಎಂ ಹೇಮಂತ್ ಸೋರೆನ್ :
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಹೇಮಂತ್ ಸೋರೇನ್ (Hemanth Soren) ಅವರು, ಮೊದಲ ಹಂತದಲ್ಲಿ ರೈತರ 50 ಸಾವಿರ ರೂ.ಗಳ ವರೆಗಿನ ಸಾಲಮನ್ನಾ ಮಾಡಲು ಯೋಜಿಸಿದ್ದೆವು. ಆದರೆ, ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ಹಾನಿಯಾದರೆ ರೈತ ಮತ್ತಷ್ಟು ಸಂಕಷ್ಟಪಡಬೇಕಾಗುತ್ತದೆ ಎಂಬ ದೃಷ್ಠಿಯಿಂದ 2 ಲಕ್ಷ ಸಾಲವನ್ನು ಒಂದೇ ಸಲಕ್ಕೆ ಮನ್ನಾ (Agriculture Loan Waiver) ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ ರಾಜ್ಯ 38 ಲಕ್ಷ ಜನರ ರೈತರ ಸುಮಾರು 400 ಕೋಟಿ ರೂ. ವರೆಗಿನ ಸಾಲ ಮನ್ನಾ ಆಗಲಿದೆ ಎಂದಿದ್ದಾರೆ.
ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ ಇದೇ 2024ರ ಡಿಸೆಂಬರ್ ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿರುವ ಜೆಎಂಎಂ ಪಕ್ಷ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದೆ. ರೈತರ ಸಾಲ ಮನ್ನಾ (Agriculture Loan Waiver) ಪ್ರಮಾಣವನ್ನು ರೂ. 2 ಲಕ್ಷಗಳವರೆಗೆ ಹೆಚ್ಚಿಸಿದ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷ ಬಿಜೆಪಿ ಕಂಡಿಸಿದ್ದು, ಇದು ಕೇವಲ ಚುನಾವಣಾ ಗಿಮಿಕ್ ಎಂದು ಆರೋಪಿಸಿದೆ. ಅಲ್ಲದೇ, ಜೆಎಂಎಂ ಪಕ್ಷಕ್ಕೆ ತಾವು ಚುನಾವಣೆಯಲ್ಲಿ ಸೋಲುವ ಮುನ್ಸೂಚನೆ ದೊರೆತಿದೆ. ಆದ್ದರಿಂದಾಗಿಯೇ ಇಷ್ಟೆಲ್ಲ ಪ್ರಯತ್ನಗಳನ್ನು ಆಡಳಿತಾರೂಢ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿಯವರ ಟೀಕೆಗೆ ಉತ್ತರಿಸಿರುವ ಸಿಎಂ ಹೇಮಂತ್ ಸೋರೇನ್ ಅವರು ರಾಜ್ಯದಲ್ಲಿ ಶೇ.80ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ರಕ್ಷಣೆ, ಅವರಿಗೆ ಬೆಂಬಲವಾಗಿ ನಿಲ್ಲಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಆನ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಕೆಲಸಗಳನ್ನು ಮಾಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
ಅಕ್ರಮ ಭೂಮಿ ವರ್ಗಾವಣೆ ಹಾಗೂ ಅಕ್ರಮ ಹಣದ ವಹಿವಾಟಿನ ಪ್ರಕರಣದಲ್ಲಿ ಸಿಎಂ ಹೇಮಂತ್ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿ, ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್ ನೀಡಿದ್ದ ಜಾಮೀನಿನ ಮೇಲೆ ಹೇಮಂತ್ ಸೋರೇನ್ (Hemanth Soren) ಹೊರಗಡೆ ಬಂದಿದ್ದಾರೆ.