ಇತ್ತೀಚೆಗೆ ನ್ಯಾಯಾಲಯದ ಕಾರ್ಯಕಲಾಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೆಲವು ವಕೀಲರ ಹಾಗೂ ಜಡ್ಜ್ಗಳ ಪಾಂಡಿತ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾದರೆ, ಇನ್ನು ಕೆಲವು ವಕೀಲರ ಕನಿಷ್ಠ ಜ್ಞಾನಕ್ಕೆ ಕೋರ್ಟ್ ಜಡ್ಜ್ ಕ್ಲಾಸ್ ತೆಗೆದುಕೊಳ್ಳುವ ವಿಡಿಯೋಗಳನ್ನೂ ನೀವು ಗಮನಿಸಿರುತ್ತೀರಿ. ಹಾಗೆಯೇ ಇಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ (CJI Chandrachud) ವಕೀಲರೊಬ್ಬರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆ ವಕೀಲರು ಮಾಡಿದ್ದೇನು? ಇಲ್ಲಿದೆ ನೋಡಿ ಸ್ಟೋರಿ.
ಸಿಜೆಐ ಚಂದ್ರಚೂಡ್ ಅತ್ಯಂತ ನಿಖರ ಹಾಗೂ ನೇರ ತೀರ್ಪುಗಳಿಗೆ ಹೆಸರಾದವರು. ಹಲವು ಕಾಲದಿಂದ ಪರಿಹಾರವಾಗದೇ ಉಳಿದ ಕೆಲವು ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಹೆಸರು ಪಡೆದವರು. ಅಂತಹವರ ಮುಂದೆ ವಾದ ಮಂಡಿಸಬೇಕಿದ್ದರೆ, ವಕೀಲರೂ ಕೂಡ ಅಷ್ಟೇ ಜ್ಞಾನ ಹೊಂದಿರಬೇಕಾಗುತ್ತದೆ. ಅರ್ಧಂಬರ್ಧ ಜ್ಞಾನದಿಂದ ವಾದಿಸಲು ಹೋದರೆ, ದೇಶದ ಸರ್ವೋಚ್ಛ ನ್ಯಾಯಾಲಯದ ಘನತೆಗೂ ಹಾಗೂ ನ್ಯಾಯಮೂರ್ತಿಗಳ ಗೌರವಕ್ಕೂ ಧಕ್ಕೆ ತರುವಂತೆ ನಡೆದುಕೊಂಡಂತಾಗುತ್ತದೆ. ಅಂತಹ ಒಂದು ಅಸಹನೀಯ ರೀತಿಯಲ್ಲಿ, ನ್ಯಾಯಾಲಯದ ರೀತಿನೀತಿಗಳನ್ನು ತಿಳಿಯದೇ ವಾದಿಸಿದಕ್ಕಾಗಿ ವಕೀಲರೊಬ್ಬರಿಗೆ ಸಿಜೆಐ ಚಂದ್ರಚೂಡ್ (CJI Chandrachud) ಬೆಂಡೆತ್ತಿದ್ದಾರೆ.
CJI Chandrachud ವಕೀಲರ ವಿರುದ್ಧ ಗರಂ ಆಗಿದ್ದೇಕೆ?
ಮಾಜಿ ಸಿಜೆಐ ರಂಜನ್ ಗೋಗೋಯ್ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ತನ್ನ ಅರ್ಜಿಯ ವಾದ ಮಂಡಿಸುತ್ತಿದ್ದ ವಕೀಲ, ನ್ಯಾಯಾಲಯದ ಪೀಠವು ಕೇಳುತ್ತಿದ್ದ ಪ್ರಶ್ನೆಗೆ ಹಾಗೂ ಮಂಡನೆಗಳಿಗೆ ಸಾಮಾನ್ಯ ಇಂಗ್ಲಿಷ್ ಭಾಷೆಯಲ್ಲಿ, ಯಾ, ಯಾ, ಯಾ ಎಂದು ತಲೆಯಾಡಿಸುತ್ತಲೇ ಇದ್ದರು. ಒಂದೆರಡು ಬಾರಿ ಸಹಿಸಿಕೊಂಡ ಸಿಜೆಐ ಚಂದ್ರಚೂಡ್, ನ್ಯಾಯಾಲಯದ ಶಿಷ್ಟಾಚಾರ ತಿಳಿಯದ ವಕೀಲನಿಗೆ, ನೀವು ಯಾ ಯಾ ಯಾ ಎಂದು ತಲೆಯಾಡಿಸಲು ಇದು ಕಾಫಿ ಶಾಪ್ ಅಲ್ಲ ಎಂದು ಸಿಟ್ಟಿನಿಂದಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ಯಾ, ಯಾ, ಯಾ ಎನ್ನಬೇಡಿ. ಇದು ಕಾಫಿ ಶಾಪ್ ಅಲ್ಲ. ಇದು ನ್ಯಾಯಾಲಯ. ಈ ಯಾ ಯಾ ಎನ್ನುವ ವ್ಯಕ್ತಿಗಳನ್ನು ನೋಡಿದರೆ ನನಗೆ ಅಸಹ್ಯ ಎನಿಸುತ್ತದೆ ಎಂದು ಸಿಜೆಐ (CJI Chandrachud) ನೇರವಾಗಿಯೇ ಚಾಟಿ ಬೀಸಿದ್ದಾರೆ.
ಈ ಮೊದಲೂ ಶಿಷ್ಟಾಚಾರ ಪಾಠ ಮಾಡಿದ್ದ ಸಿಜೆಐ!
ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ಅವರು ನ್ಯಾಯಾಲಯದ ಶಿಷ್ಟಾಚಾರ ಪಾಲಿಸದಿದ್ದವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಮಾರ್ಚ್ನಲ್ಲಿ ನಡೆದ ನೀಟ್- ಯುಜಿ ಕೇಸ್ನ ವಾದ ಮಂಡನೆಯಲ್ಲಿ, ಕೇಸಿನ ಪ್ರತಿವಾದಿ ಅಡ್ವೋಕೇಟ್ಗೆ ತನ್ನ ವಾದ ಮಂಡಿಸಲು ಬಿಡದೇ, ಹಿರಿಯ ಅಡ್ವೋಕೇಟ್ ಎನ್ನುವ ಕಾರಣಕ್ಕೆ ಪದೇ ಪದೇ ಮಾತಿನ ಮಧ್ಯೆ ಪ್ರವೇಶಿಸಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪರ ಎನ್ನುವವರನ್ನು ಕೂಡಲೇ ನ್ಯಾಯಾಲಯದಿಂದ ಹೊರಗೆ ಹಾಕಿ ಎಂದು ಸೆಕ್ಯುರಿಟಿಗೆ ಆಜ್ಞೆ ಮಾಡಿದ್ದರು.
ಅದೇ ಕೇಸಿನಲ್ಲಿ ಪ್ರತಿವಾದಿಯಾಗಿದ್ದ ವಕೀಲ ನರೇಂದರ್ ಹೂಡ ಅವರ ವಾದದ ನಡುವೆ, ತನ್ನ ಸೀನಿಯಾರಿಟಿ ಕಾರ್ಡ್ ಬಳಸಿಕೊಂಡು ನ್ಯಾಯಾಲಯದ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಹಿರಿಯ ವಕೀಲರಿಗೇ ಗೇಟ್ ಪಾಸ್ ಶಿಕ್ಷೆ ನೀಡಿದ ಸಿಜೆಐ ಚಂದ್ರಚೂಡ್ (CJI Chandrachud) ಅವರ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ, ನ್ಯಾಯಾಲಯದ ಶಿಷ್ಟಾಚಾರ ತಿಳಿಯದೇ ಮೂರ್ಖತನದಿಂದ ವ್ಯವಹರಿಸಿ ಯಾ ಯಾ ಎಂದ ವಕೀಲರಿಗೂ ಸಿಜೆಐ ಚಾಟಿ ಬೀಸಿದ್ದು, ನ್ಯಾಯಾಲಯದ ಶಿಷ್ಟಾಚಾರ ಹಾಗೂ ಗೌರವ ಕಾಪಾಡಲು ಇಂತಹ ನ್ಯಾಯಮೂರ್ತಿಗಳಿರಬೇಕು ಎಂದು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಪಾಕಿಸ್ತಾನ ಕಮೆಂಟ್ ವಿಚಾರದಲ್ಲೂ ನೇರವಾಗಿ ತನ್ನ ನಿರ್ಧಾರ ಮಂಡಿಸಿದ ಸಿಜೆಐ ಚಂದ್ರಚೂಡ್ ಅವರ ಜ್ಞಾನ ಹಾಗೂ ಕಾನೂನು ವಿವೇಚನೆಯನ್ನು ಇಲ್ಲಿ ಸ್ಮರಿಸಬಹುದು.
ಏನೇ ಇರಲಿ. ಯಾವುದೇ ಕೇಸ್ ಅಥವಾ ವಿಚಾರದ ಬಗ್ಗೆ ವಾದ ಮಂಡಿಸುವ ಮುನ್ನ ವಕೀಲರು ಕೂಡ ಸಮರ್ಪಕ ಜ್ಞಾನ ಹೊಂದಿರಬೇಕಿದ್ದು, ಅರ್ಧಂಬರ್ಧ ಜ್ಞಾನ, ವಿವೇಚನೆಯೇ ಇಲ್ಲದೇ ನ್ಯಾಯಾಲಯ ಪ್ರವೇಶಿಸುವವರಿಂದ ನ್ಯಾಯವೂ ದೊರಕುವುದಿಲ್ಲ ಹಾಗೂ ನ್ಯಾಯಾಲಯದ ಶಿಷ್ಟಾಚಾರಕ್ಕೂ ಅಪಮಾನ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.