ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುಡಾದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ, ಲೋಕಾಯುಕ್ತ ವಿಚಾರಣೆ ನಡೆಸಲು ಆದೇಶ ಹೊರಡಿಸಿದೆ.
ಇಂದು ಆದೇಶ ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲವು, ಸಿಎಂ ಸಿದ್ದರಾಮಯ್ಯನವರ (CM Siddaramaiah) ವಿರುದ್ಧ ಮುಡಾ ಹಗರಣದಲ್ಲಿ (MUDA Land Scam) ಎಫ್ಐಆರ್ ದಾಖಲಿಸಿ ಮುಂದಿನ 3 ತಿಂಗಳುಗಳ ಒಳಗಾಗಿ ವಿಚಾರಣೆ ಪೂರ್ಣಗೊಳಿಸಬೇಕೆಂದು ತೀರ್ಪು ನೀಡಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿದ್ದರಾಮಯ್ಯನವರಿಗೆ ನಿನ್ನೆಯಷ್ಟೇ ಮುಖಭಂಗವಾಗಿತ್ತು. ರಾಜ್ಯಪಾಲರ ಆದೇಶದ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾ. ಎಂ. ನಾಗಪ್ರಸನ್ನ ಅವರ ಪೀಠವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17 ಅ ಅಡಿ ಸಿಎಂ ವಿರುದ್ಧ ವಿಚಾರಣೆಗೆ ಆದೇಶ ನೀಡಿತ್ತು. ಅಲ್ಲದೇ, ಕೆಳ ಹಂತದ ನ್ಯಾಯಾಲಯಗಳ ಮೇಲೆ ಮಧ್ಯಂತರ ಆದೇಶ ವಿಸ್ತರಿಸುವ ಮನವಿಯನ್ನೂ ನಿರಾಕರಿಸಿತ್ತು.
ಮುಡಾ ಹಗರಣ (MUDA Land Scam) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ (CM Siddaramaiah) ನೇರ ಹಸ್ತಕ್ಷೇಪವಿಲ್ಲ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರ ಕುಟುಂಬದವರೇ ಆರೋಪಿಗಳಾಗಿರುವುದರಿಂದ 17 ಎ ಅಡಿ ವಿಚಾರಣೆ ನಡೆಸಬಹುದು. ಕೇವಲ 2 ಸೈಟ್ ಪಡೆಯುವ ಜಾಗದಲ್ಲಿ 14 ಸೈಟ್ ಪಡೆದು ಅಕ್ರಮ ಎಸಗಲಾಗಿದೆ. ಇದರಿಂದಾಗಿ ಮುಡಾಗೆ 56 ಕೋಟಿ ರೂ. ನಷ್ಟವಾಗಿದೆ ಎಂದು ತೀರ್ಪಿನಲ್ಲಿ ಕೋರ್ಟ್ ತನ್ನ ಅಭಿಪ್ರಾಯ ದಾಖಲಿಸಿತ್ತು.
ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿಜೆ ಅಬ್ರಹಾಂ ಹಾಗೂ ಪ್ರದೀಪ್ ಕುಮಾರ್ ಅವರ ಅರ್ಜಿಯ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ತನ್ನ ಆದೇಶವನ್ನು ಹೊರಡಿಸಿದೆ.
ಸೆಪ್ಟೆಂಬರ್ 26 ರಂದು ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯನವರ (CM Siddaramaiah) ವಿರುದ್ಧ ಮುಡಾ ಹಗರಣ (MUDA Land Scam) ಪ್ರಕರಣದಲ್ಲಿ ಅಧಿಕೃತ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : MUDA Case: ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಗ್ಯಾರೆಂಟಿ? – ವಿಚಾರಣೆಗೆ ಹೈಕೋರ್ಟ್ ಅಸ್ತು
ಕಾಂಗ್ರೆಸ್ V/s ಬಿಜೆಪಿ ವಾಕ್ಸಮರ :
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯನವರು, ನಾನು ತನಿಖೆಯನ್ನು ಎದುರಿಸುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಬಿಜೆಪಿಯ ಷಡ್ಯಂತ್ರಕ್ಕೆ ತಲೆಬಾಗುವುದಿಲ್ಲ ಎಂದಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು, ಸಿದ್ದರಾಮಯ್ಯನವರು ನೈತಿಕತೆಯಿದ್ದರೆ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಸ್ಥಾನದಲ್ಲಿ ಮುಂದುವರೆದರೆ ನಿಷ್ಪಕ್ಷಪಾತ ತನಖೆ ನಡೆಯುವುದು ಅಸಾಧ್ಯ ಎಂದಿದ್ದಾರೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ಕೋರಿ ಸಿದ್ದರಾಮಯ್ಯನವರು ಶೀಘ್ರವೇ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.
ಕರ್ನಾಟಕ ಲೋಕಾಯುಕ್ತ :
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸರ್ಕಾರದಲ್ಲಿನ ಅಧಿಕಾರಿಗಳು ಹಾಗೂ ಸಚಿವರ ಮೇಲೆ ಭ್ರಷ್ಟಾಚಾರದ ತನಿಖೆ ನಡೆಸಲು ಸ್ಥಾಪನೆಯಾದ ಸ್ವಾಯತ್ತ ಸಂಸ್ಥೆ. ಆದರೆ, 2016 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಇದೇ ಸಿದ್ದರಾಮಯ್ಯನವರು ಪೊಲೀಸ್ ಇಲಾಖೆಯಲ್ಲಿಯೇ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ)ವನ್ನು ಸ್ಥಾಪಿಸಿ, ಲೋಕಾಯುಕ್ತದ ವಿಚಾರಣಾ ಅಧಿಕಾರವನ್ನು ಕಿತ್ತುಕೊಂಡಿದ್ದರು. ಅಂದಿನಿಂದ ಕರ್ನಾಟಕ ಲೋಕಾಯುಕ್ತವು ಸರ್ಕಾರದ ಅನುಮತಿಯಿಲ್ಲದೇ ಯಾವುದೇ ಅಧಿಕಾರಿಗಳು ಹಾಗೂ ಸಚಿವರು, ಸಿಎಂ ಮೇಲೆ ವಿಚಾರಣೆ ನಡೆಸುವಂತಿಲ್ಲ ಎಂಬ ಆದೇಶ ನೀಡಲಾಗಿದ್ದು, ಹಲ್ಲು ಕಿತ್ತ ಹಾವಿನಂತಾಗಿದೆ.