ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ, ಮುಡಾ ಹಗರಣದ ವಿಚಾರದಲ್ಲಿ ಲೋಕಾಯುಕ್ತ ತನಿಖೆಗೆ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿದ್ದ ಬಿಜೆಪಿ ನಾಯಕರಿಗೆ ರಾಜ್ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ Electoral Bond ವಿಚಾರದಲ್ಲಿ ಬಹುದೊಡ್ಡ ಶಾಕ್ ನೀಡಿದೆ.
ಹೌದು. ಸಿಎಂ ಸಿದ್ದರಾಮಯ್ಯ (Siddaramaiah) ನವರ ಪತ್ನಿಯ ಹೆಸರಿಗೆ ಮುಡಾ ಸೈಟ್ ಪಡೆದ ವಿಚಾರವಾಗಿ ದಾಖಲಾದ ಎಫ್ಐಆರ್ ದಾಖಲಾದ ಬೆನ್ನಲ್ಲೇ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಾ ಕಾಲಕಳೆಯುತ್ತಿರುವ ಬಿಜೆಪಿ ನಾಯಕರಿಗೆ ಬಹಳದೊಡ್ಡ ಕಂಟಕವೊಂದು ಸುತ್ತಿಕೊಂಡಂತಿದೆ.
ಚುನಾವಣಾ ಬಾಂಡ್ (Electoral Bond) ವಿಚಾರದಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ಧ, ಎಫ್ಐಆರ್ ದಾಖಲಿಸುವಂತೆ 42 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದ್ದು, ಬಿಜೆಪಿ ನಾಯಕರಿಗೆ ಬಹುದೊಡ್ಡ ಶಾಕ್ ನೀಡಿದಂತಾಗಿದೆ.
Electoral Bond: ಪ್ರಕರಣ ಏನು?
ಚುನಾವಣಾ ಬಾಂಡ್ಗಳ ಮೂಲಕ ಸುಲಿಗೆ ಮಾಡಲಾಗಿದೆ ಎಂದು ದಾಖಲಾಗಿರುವ ಈ ದೂರಿನಲ್ಲಿ, 2019 ರ ಏಪ್ರಿಲ್ನಿಂದ 2022 ರ ಆಗಸ್ಟ್ವರೆಗೆ ಅನಿಲ್ ಅಗರ್ವಾಲ್ ಸಂಸ್ಥೆಯಿಂದ 230 ಕೋಟಿ ರೂಪಾಯಿ ಹಾಗೂ ಅರಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರೂ. ಗಳಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಜನಾಧಿಕಾರಿ ಸಂಘರ್ಷ ಪರಿಷತ್ನ ಆದರ್ಶ್ ಆರ್ ಅಯ್ಯರ್ ಎನ್ನುವವರು ಬೆಂಗಳೂರಿನ ಎಸಿಎಂಎಂ ಕೋರ್ಟ್ಗೆ ದೂರನ್ನು ಸಲ್ಲಿಸಿದ್ದರು.
ದೂರಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ (JP Nadda), ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra), ಕೇಂದ್ರ ಬಿಜೆಪಿ ಕಚೇರಿ, ಇ.ಡಿ ಹಾಗೂ ರಾಜ್ಯ ಬಿಜೆಪಿ ಕಚೇರಿ ಹೆಸರನ್ನು ನಮೂದಿಸಿ ಆದರ್ಶ್ ಅಯ್ಯರ್ ಅವರು ದೂರು ದಾಖಲಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ವಿವಾದಕ್ಕೀಡಾಗಿದ್ದ ಚುನಾವಣಾ ಬಾಂಡ್ (Electoral Bond) ಅಕ್ರಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆಲವು ರಾಜಕೀಯ ಪಕ್ಷಗಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆದರೆ, ಚುನಾವಣಾ ರಂಗ ಕಾವೇರುತ್ತಿದ್ದಂತೆ ಅಲ್ಲಿಗೇ ತಣ್ಣಗಾದ ಈ ವಿಚಾರ, ಇದೀಗ ಮತ್ತೆ ಈ ದೂರಿನಿಂದ ಭುಗಿಲೆದ್ದಿದೆ.
FIR ಗೆ ಆದೇಶಿಸಿದ ಕೋರ್ಟ್
ಆದರ್ಶ್ ಅಯ್ಯರ್ ಅವರ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ದೂರಿನ ಪ್ರತಿ ಹಾಗೂ ದಾಖಲೆಯನ್ನು ತಿಲಕ್ನಗರ ಪೊಲೀಸ್ ಠಾಣೆಗೆ ಕಳಿಸುವಂತೆ ಆದೇಶ ಹೊರಡಿಸಿದೆ. ಠಾಣೆಗೆ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದ ನ್ಯಾಯಾಲಯ, ಎಫ್ಐಆರ್ ಸಂಬಂಧಿತ ವಿಚಾರಣೆಯನ್ನು ಅಕ್ಟೋಬರ್ 10 ಕ್ಕೆ ಮುಂದೂಡಿದೆ.
ಈ ಚುನಾವಣಾ ಬಾಂಡ್ (Electoral Bond) ವಿಚಾರ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದು, ದೇಶದ ಬಹುದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಈಗಾಗಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಮುಡಾ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡವನ್ನು ಬಿಜೆಪಿ ನಿರೀಕ್ಷಿಸುತ್ತಿದ್ದರೆ, ಚುನಾವಣಾ ಬಾಂಡ್ ವಿಚಾರಕ್ಕೆ ಇನ್ನಷ್ಟು ಕಿಚ್ಚು ಹಚ್ಚಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ. ಈ ಎರಡೂ ಪ್ರಕರಣಗಳು ಯಾವ ಹಂತವನ್ನು ತಲುಪುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.