ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಅಭಿವೃದ್ಧಿಗಾಗಿ ಒಂದಿಲ್ಲೊಂದು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿ ಮಾಡುತ್ತಲೇ ಬಂದಿವೆ. ಈ ದಿಶೆಯಲ್ಲಿ ಬೃಹತ್ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ವೃದ್ಧಾಪ್ಯದಲ್ಲಿ ಸಂಕಷ್ಟ ಪಡಬಾರದು ಎನ್ನುವ ದೃಷ್ಠಿಕೋನದಿಂದ ಸಾಮಾಜಿಕ ಭದ್ರತೆ ಕಲ್ಪಿಸಲು ಪಿಎಂ ಕಿಸಾನ್ ಮಾನ್ ಧನ್ (PM Kisan Maandhan) ಯೋಜನೆಯನ್ನು ಆರಂಭಿಸಿದೆ.
ದೇಶದ ಸಣ್ಣ ಹಾಗೂ ಅತಿಸಣ್ಣ ರೈತ ಫಲಾನುಭವಿಗಳಿಗೆ ಈ ಯೋಜನೆಯಡಿ ಪ್ರತಿ ತಿಂಗಳೂ 3,000 ರೂ.ಗಳನ್ನು ಸಹಾಯಧನವನ್ನು ಸರ್ಕಾರವು ನೇರ ಅವರ ಖಾತೆಗೆ ವರ್ಗಾಯಿಸಲಿದೆ. ಅರ್ಹ ರೈತರು ಶೀಘ್ರವೇ ಈ ಯೋಜನೆಯಡಿ ನೋಂದಣಿಯಾಗಬಹುದು.
ಏನಿದು ಪಿಎಂ ಕಿಸಾನ್ ಮಾನ್ ಧನ್ ಯೋಜನೆ :
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ವೃದ್ಧಾಪ್ಯದಲ್ಲಿ ಜೀವನೋಪಾಯದ ಮಾರ್ಗಗಳಿಲ್ಲದಿರುವಾಗ ಮತ್ತು ಕಾಳಜಿ ವಹಿಸಲು ಯಾವುದೇ ಉಳಿತಾಯವಿಲ್ಲದಿರುವಾಗ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರವು 2019ರಲ್ಲಿ ಪಿಎಂ ಕಿಸಾನ್ ಮಾನ್ ಧನ್ (PM Kisan Maandhan) ಯೋಜನೆಯನ್ನು ಜಾರಿಗೆ ತಂದಿದೆ.
ಶ್ರಮ್ ಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ವರ್ಗಕ್ಕೆ ಹಾಗೂ ಕಿಸಾನ್ ಮಾನ ಧನ್ ಯೋಜನೆಯಡಿ ಅತಿಸಣ್ಣ ಹಾಗೂ ಸಣ್ಣ ರೈತರಿಗೆ ಅನುಕೂಲವಾಗಿದೆ. ಇದು ವಿಮೆ ರೀತಿಯ ಯೋಜನೆಯಾಗಿದ್ದು, 18 ರಿಂದ 40 ವರ್ಷದೊಳಗಿನ ರೈತರು ಹಾಗೂ ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರ ನೋಂದಣಿಯಾಗಬಹುದು. ನೋಂದಣಿಯ ಸಮಯದಲ್ಲಿ ಕನಿಷ್ಠ 100 ರೂ.ಗಳನ್ನು ಠೇವಣಿಯಾಗಿ ಇಡಬೇಕು. ನಂತರ ಪ್ರತಿ ತಿಂಗಳು ನಿಗದಿಪಡಿಸಿದ ಹಣವನ್ನು ಈ ಖಾತೆಯಲ್ಲಿ ಠೇವಣಿ ಮಾಡುತ್ತಾ ಹೋಗಬೇಕು. ಫಲಾನುಭವಿಗಳಿಗೆ 60 ವರ್ಷದ ನಂತರ ಈ ಯೋಜನೆಯನುಸಾರ ಪಿಂಚಣಿಯ ಲಾಭ ತಲುಪಲಿದೆ.
ಈ ಯೋಜನೆಯಡಿ ರೈತರು ತಮ್ಮ ಖಾತೆಗೆ ಪ್ರತಿ ತಿಂಗಳು ಉಳಿತಾಯದ ಕೊಡುಗೆ ನೀಡಬೇಕು. ರೈತರು ನೀಡಿದಷ್ಟು ಕೊಡುಗೆಯನ್ನು ಸರ್ಕಾರವೂ ನೀಡಲಿದೆ. ಉದಾಹರಣೆಗೆ ರೈತರು ತಮ್ಮ ಖಾತೆಗೆ ಪ್ರತಿ ತಿಂಗಳು 500 ರೂ. ಠೇವಣಿ ಮಾಡಿದರೆ, ಸರ್ಕಾರವೂ 500 ರೂ. ಠೇವಣಿ ಇಡಲಿದೆ.
ಈ ಯೋಜನೆಯ ಅರ್ಹತೆಗಳು :
– 18 ರಿಂದ 40 ವಯಸ್ಸಿನ ರೈತರು.
– 2 ಹೆಕ್ಟೇರ್ ವರೆಗೆ ಸಾಗುವಳಿ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿಸಣ್ಣ ರೈತರು.
– ESI/PF ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಣಿಯಾಗದ ರೈತರು.
– ಶ್ರಮ್ ಯೋಗಿ ಮಾನ್ ಧನ್ ಯೋಜನೆಯಡಿ ನೋಂದಣಿಯಾಗಿಲ್ಲದ ರೈತರು.
ಅರ್ಜಿ ಸಲ್ಲಿಸುವುದು ಹೇಗೆ.?
ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ (PM Kisan Maandhan) ನೋಂದಣಿಯಾಗಲು ರೈತರು ಹತ್ತಿರದ ನಾಗರಿಕ ಸೇವಾ ಕೇಂದ್ರಗಳು (ಸಿಎಸ್ಸಿ) ಗಳಿಗೆ ಭೇಟಿ ನೀಡಬಹುದು. ಇಲ್ಲವೇ, ಅಧಿಕೃತ ಜಾಲತಾಣದ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. (ಅಧಿಕೃತ ಲಿಂಕ್ : https://pmkmy.gov.in/ ಗೆ ಭೇಟಿ ನೀಡಿ.)
ನೋಂದಣಿಗೆ ಬೇಕಾಗುವ ದಾಖಲೆಗಳು :
– ರೈತನ/ಸಂಗಾತಿಯ ಹೆಸರು ಹಾಗೂ ಜನ್ಮದಿನಾಂಕ
– ಆಧಾರ್ ಕಾರ್ಡ್
– ಬ್ಯಾಂಕ್ ಪಾಸ್ ಬುಕ್
– ಸಾಗುವಳಿ ಭೂಮಿ ಹೊಂದಿದ್ದರ ಬಗ್ಗೆ ಪಹಣಿ
– ಮೊಬೈಲ್ ಸಂಖ್ಯೆ
ಈ ಯೋಜನೆಯಡಿ ಠೇವಣಿ ಇಡುವ ಮೂಲಕ ರೈತರು 60 ವರ್ಷದ ನಂತರ ಕನಿಷ್ಠ 3 ಸಾವಿರ ರೂ.ಗಳ ಪಿಂಚಣಿ ಪಡೆಯಬಹುದು. 18 ರಿಂದ 40 ರ ವಯಸ್ಸಿನ ಆಧಾರದ ಮೇಲೆ ಸರ್ಕಾರೇ ಪ್ರತಿತಿಂಗಳು ರೈತರು ಪಾವತಿಸಬೇಕಾದ ಕನಿಷ್ಠ ಹಣವನ್ನು ತಿಳಿಸುತ್ತದೆ. ಪ್ರಸ್ತುತ 18 ವಯಸ್ಸಿನ ರೈತ 55 ರೂ.ಗಳನ್ನು ಹಾಗೂ 40 ವಯಸ್ಸಿನ ರೈತ 200 ರೂ.ಗಳನ್ನು ಠೇವಣಿ ಇಡಬೇಕು. ಇದಕ್ಕೆ ಸಮನಾಗಿ ಕೇಂದ್ರ ಸರ್ಕಾರವೂ ಹಣ ಜಮೆ ಮಾಡಲಿದೆ. ನೀವು ಪ್ರತಿ ತಿಂಗಳೂ ಬ್ಯಾಂಕ್ ಗೆ ಹೋಗಿಯೇ ಪ್ರೀಮಿಯಂ ಪಾವತಿಸಬೇಕೆಂದಿಲ್ಲ. ನೋಂದಣಿ ಸಮಯದಲ್ಲಿ ಬ್ಯಾಂಕ್ಗೆ ಇಸಿಎಸ್ ಕೊಟ್ಟರೆ ಸಾಕು. ಪ್ರತಿ ತಿಂಗಳು ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ಯೋಜನೆಯ ಖಾತೆಗೆ ವರ್ಗಾಣೆಯಾಗುತ್ತದೆ. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರದ ಸಹಾಯವಾಣಿ ಸಂಖ್ಯೆ 1800 267 6888 ಗೆ ಸಂಪರ್ಕಿಸಿ.