ಇನ್ನೇನು ಐಪಿಎಲ್ 2025 (IPL 2025) ರ ಆವೃತ್ತಿಗೆ ಮೆಗಾ ಹರಾಜು ಆರಂಭವಾಗಲಿದೆ. ಈ ಬಾರಿ ಮೆಗಾ ಹರಾಜಿಗೆ ಮುನ್ನ ಅತಿ ಪ್ರಮುಖ ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡು, ಇನ್ನುಳಿದ ಆಟಗಾರರನ್ನು ಮೆಗಾ ಹರಾಜಿನಲ್ಲಿ (Mega Auction) ಖರೀದಿಸುವ ಒಪ್ಪಂದಕ್ಕೆ ಬಿಸಿಸಿಐ (BCCI) ಮತ್ತು ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಸಹಿ ಹಾಕಿವೆ. ಇದೀಗ ಬಿಸಿಸಿಐ ಮತ್ತೊಂದು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ವಿದೇಶಿ ಆಟಗಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಹೌದು. ಐಪಿಎಲ್ ಬಹುತೇಕ ವಿದೇಶಿ ಆಟಗಾರರಿಗೆ ಕ್ರಿಕೆಟ್ ಜೀವನದಲ್ಲಿ ಕ್ಲಿಕ್ ಆಗಲು ದೊಡ್ಡ ವೇದಿಕೆ. ದೇಶೀಯ ಪ್ರತಿಭೆಗಳಷ್ಟೇ ಅಲ್ಲದೇ, ಬಹುತೇಕ ವಿದೇಶಿ ಆಟಗಾರರಿಗೆ ತಮ್ಮ ಟಿ20 ಪ್ರದರ್ಶನದ ತಾಕತ್ತು ತೋರಿಸಲು ಅತ್ಯುತ್ತಮ ವೇದಿಕೆಯಾಗಿ ಹಾಗೂ ಹಣ ಗಳಿಸಲು ಕೂಡ ಒಂದು ಮಾಧ್ಯಮವಾಗಿ ಮಾರ್ಪಟ್ಟಿದೆ. ಆದರೆ, ಕಳೆದ ಕೆಲವು ಸೀಸನ್ಗಳಲ್ಲಿ ವಿದೇಶಿ ಆಟಗಾರರು ತೋರಿರುವ ನಿಷ್ಠೆಯ ಬಗ್ಗೆ ಅಸಮಾಧಾನ ಹೊಂದಿರುವ ಬಿಸಿಸಿಐ, ಅಂತಹ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿ ಅರ್ಧಕ್ಕೇ ಮರಳುವ ವಿದೇಶಿ ಪ್ಲೇಯರ್ಗಳು!
ಐಪಿಎಲ್ನಲ್ಲಿ ಹರಾಜು ಪ್ರಕ್ರಿಯೆಯಲಿ ಕೆಲವು ವಿದೇಶಿ ಆಟಗಾರರು ಬಹಳ ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಾರೆ. ವಿದೇಶಿ ಟಿ20 ಟೂರ್ನಮೆಂಟ್ಗಳಲ್ಲಿ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಫಾರ್ಮ್ ಅಥವಾ ಅನುಭವವನ್ನು ಗಮನಿಸಿ ಫ್ರಾಂಚೈಸಿಗಳು ಆ ಆಟಗಾರನ ಮೇಲೆ ತಮ್ಮ ಮೊತ್ತವನ್ನು ಹೆಚ್ಚಿಸುತ್ತಾ ಹೋದಂತೆ, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚಿನ ಮೊತಕ್ಕೆ ಬಿಕರಿಯಾಗುವ ವಿದೇಶಿ ಆಟಗರರೂ ಕೂಡ ಇದ್ದಾರೆ. ಉದಾ: ಕಳೆದ ಸೀಸನ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (Mitchell Starc) ಹಾಗೂ ಪ್ಯಾಟ್ ಕಮಿನ್ಸ್ (Pat Cummins) ₹20 ಕೋಟಿಗೂ ಮಿಕ್ಕಿ ಮೊತ್ತಕ್ಕೆ ಸೇಲ್ ಆಗಿದ್ದು.
ಆದಾಗ್ಯೂ, ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದರೂ ಕೂಡ, ಕೆಲ ವಿದೇಶಿ ಆಟಗಾರರು ಟೂರ್ನಮೆಂಟ್ ನಡುವೆಯೇ, ತಮ್ಮ ವೈಯುಕ್ತಿಕ ಕಾರಣ ಅಥವಾ ರಾಷ್ಟ್ರೀಯ ತಂಡದ ಕರೆಯ ಕಾರಣ ನೀಡಿ ನಿರ್ಣಾಯಕ ಘಟ್ಟದಲ್ಲೇ ತಂಡಕ್ಕೆ ಕೈಕೊಡುವ ಉದಾಹರಣೆಗಳಿವೆ. ಅದರಲ್ಲೂ ಆಸ್ಟ್ರೇಲಿಯಾ (Australia) ತಂಡದ ಆಟಗರರು ತಮ್ಮ ರಾಷ್ಟ್ರೀಯ ತಂಡದ ಕರೆಗೆ ಅರ್ಧದಲ್ಲೇ ತಂಡದ ಕೈಬಿಟ್ಟು ಹೋಗುವ ನಿರ್ಧಾರ ಕೈಗೊಳ್ಳುತ್ತಾರೆ. ಅಂತಹ ಪ್ರಯತ್ನಗಳ ವಿರುದ್ಧ ಈ ಬಾರಿಯ ಐಪಿಎಲ್ನಲ್ಲಿ (IPL 2025) ಕಠಿಣ ಕ್ರಮ ಕೈಗೊಂಡು, ಕೈಕೊಟ್ಟು ಹೋಗುವ ಆಟಗಾರರಿಗೆ ಮೂಗುದಾರ ಹಾಕಲು ಬಿಸಿಸಿಐ ತೀರ್ಮಾನಿಸಿದೆ.
IPL 2025: ಕೈಕೊಟ್ಟು ಹೋದರೆ ಬ್ಯಾನ್ ಶಿಕ್ಷೆ!
ಹರಾಜಿಗೆ ನೋಂದಾಯಿಸಿಕೊಂಡು ನಂತರ ಆಟದ ನಡುವೆಯೇ ತಂಡವನ್ನು ತೊರೆದು ತಮ್ಮ ದೇಶಕ್ಕೆ ಮರಳುವ ವಿದೇಶಿ ಆಟಗಾರರಿಗೆ, ಅಂತಹ ಪ್ರಯತ್ನದ ವಿರುದ್ಧ ಈ ಬಾರಿಯ ಐಪಿಎಲ್ (IPL 2025) ನಲ್ಲಿ ಶಿಕ್ಷೆಯ ರೂಪದಲ್ಲಿ ಸತತ ಎರಡು ವರ್ಷ ಅಥವಾ ಎರಡು ಸೀಸನ್ಗಳ ಬ್ಯಾನ್ (2 Season Ban) ಶಿಕ್ಷೆ ಹೇರಲು ಬಿಸಿಸಿಐ ತೀರ್ಮಾನಿಸಿದೆ. ಸಕಾರಣಗಳಿಲ್ಲದೇ, ತಂಡವನ್ನು ನಿರ್ಣಾಯಕ ಹಂತದಲ್ಲಿ ಕೈಬಿಡುವ ವಿದೇಶಿ ಆಟಗಾರರಿಗೆ ಈ ರೀತಿಯ ಷರತ್ತು ವಿಧಿಸಲು ಬಿಸಿಸಿಐ ತೀರ್ಮಾನಿಸಿದ್ದು, ಅರ್ಧಕ್ಕೇ ಐಪಿಎಲ್ ತೊರೆದು ಪೂರ್ತಿ ದುಡ್ಡು ವಸೂಲಿ ಮಾಡಿಕೊಂಡು ಹೋಗುವ ವಿದೇಶಿ ಆಟಗಾರರ ಮೇಲಾಟಕ್ಕೆ ಇದರಿಂದ ಬ್ರೇಕ್ ಬಿದ್ದಂತಾಗಿದೆ.
ಆದರೆ, ಗಾಯದ ಸಮಸ್ಯೆ ಅಥವಾ ಸೂಕ್ತ, ನ್ಯಾಯವಾದ ಕಾರಣಗಳ ಸಂದರ್ಭದಲ್ಲಿ ಆಟಗಾರರು ತಂಡವನ್ನು ತೊರೆದು ಹೋಗಬಹುದು. ಅದಕ್ಕೆ ಯಾವುದೇ ರೀತಿಯ ಪೆನಾಲ್ಟಿ ವಿಧಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಅಷ್ಟೇ ಅಲ್ಲದೇ, ಮೆಗಾ ಹರಾಜಿನಲ್ಲಿ ಕೂಡ, ಯಾವುದೇ ವಿದೇಶಿ ಆಟಗಾರನು, ತಂಡದ ಅತಿ ಹೆಚ್ಚಿನ ಹರಾಜಿನ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವಂತಿಲ್ಲ ಎಂದು ಫ್ರಾಂಚೈಸಿಗಳಿಗೆ ಈಗಾಗಲೇ ಬಿಸಿಸಿಐ ಸೂಚನೆ ನೀಡಿದೆ.
IPL 2025 ಮೆಗಾ ಹರಾಜಿನಲ್ಲಿರಲಿದೆ ಸಖತ್ ಟ್ವಿಸ್ಟ್!
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಬಹಳ ದೊಡ್ಡ ಬದಲಾವಣೆಗಳೇ ಆಗುವ ಸಾಧ್ಯತೆಗಳಿದ್ದು, ಬಹಳ ಪ್ರಮುಖ ಆಟಗಾರರು ತಮ್ಮ ಹಿಂದಿನ ತಂಡದಿಂದ ಬೇರ್ಪಟ್ಟು ಇನ್ನೊಂದು ತಂಡದ ಪಾಲಾಗುವ ಸಾಧ್ಯತೆಯಿದೆ. ಅದರಲ್ಲೂ, ಮೂಲಗಳು ಹೇಳುವಂತೆ ಮುಂಬೈ ತಂಡದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರನ್ನು ಕೂಡ ತಂಡ ಹರಾಜಿನಲ್ಲಿ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಾರಿ ವಿದೇಶಿ ಆಟಗಾರರು ಹಾಗೂ ದೇಶೀಯ ಪ್ರತಿಭೆಗಳು ಯಾವೆಲ್ಲಾ ತಂಡದ ಪಾಲಾಗಲಿದ್ದಾರೆ ಹಾಗೂ ಹೇಗೆ ಕ್ಲಿಕ್ ಆಗಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ. ನವೆಂಬರ್ ಮೂರನೇ ಅಥವಾ ಅಂತಿಮ ವಾರದಲ್ಲಿ ನಡೆಯಲಿದೆ ಎನ್ನಲಾದ ಮೆಗಾ ಹರಾಜಿನಲ್ಲಿ ಯಾವೆಲ್ಲಾ ತಂಡಗಳನ್ನು ಯಾವೆಲ್ಲಾ ಆಟಗಾರರು ಸೇರಲಿದ್ದಾರೆ ಎನ್ನುವುದು ತಿಳಿಯಲಿದೆ.