ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ (Ind vs NZ Test) ನಡುವಿನ ಮೊದಲ ಟೆಸ್ಟ್ ನಲ್ಲಿ ಕಿಂಗ್ ಕೊಹ್ಲಿ (Virat Kohli) ನೂತನ ದಾಖಲೆ ಬರೆದಿದ್ದಾರೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಾಟ ಬುಧವಾರವೇ ಆರಂಭವಾಗಬೇಕಿತ್ತು. ಆದರೆ, ಮಳೆಯಿಂದಾಗಿ ಇಂದು ಗುರುವಾರ ಆರಂಭವಾಗಿದೆ. ಮೊದಲ ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡ ಕೇವಲ 46 ರನ್ಗಳಿಗೆ ಆಲೌಟ್ ಆಗಿ, ನಿರಾಶೆ ಮೂಡಿಸಿದೆ.
ಈ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಜೀರೋ ರನ್ ಗಳಿಗೆ ಡಕೌಟ್ ಆಗಿದ್ದರೂ, ಹೊಸ ದಾಖಲೆ ಬರೆದಿದ್ದಾರೆ. ಎಂ.ಎಸ್ ಧೋನಿಯವರ (MS Dhoni) ದಾಖಲೆಯನ್ನು ಮುರಿದು ಈ ದಾಖಲೆ ಮಾಡಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ಕಿಂಗ್ ಕೊಹ್ಲಿ ಸಾಧನೆ :
ಭಾರತ ಮತ್ತು ನ್ಯೂಜಿಲೆಂಡ್ (Ind vs NZ Test) ನಡುವಿನ ಮೊದಲ ಟೆಸ್ಟ್ ನಲ್ಲಿ ಬ್ಯಾಟಿಂಗ್ ಮಾಡಲು ಕ್ರೀಡಾಂಗಣಕ್ಕೆ ಇಳಿಯುತ್ತಲೇ ವಿರಾಟ್ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಶೂನ್ಯಕ್ಕೆ ಔಟ್ ಆಗಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿದ್ದರೂ, ಮತ್ತೊಂದು ದಾಖಲೆ ಬರೆಯುವ ಮೂಲಕ ಸಂತಸ ನೀಡಿದ್ದಾರೆ.
ಹೌದು, ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಾಟಗಳಲ್ಲಿ ಅತಿಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಎನ್ನುವ ಕೀರ್ತಿಗೆ ಕಿಂಗ್ ಕೊಹ್ಲಿ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಭಾರತ ತಂಡದ ಪರವಾಗಿ ಎಲ್ಲಾ ಮಾದರಿಯ 536 ಅಂತರಾಷ್ಟ್ರೀಯ ಪಂದ್ಯಾಟಗಳನ್ನು ಆಡುವ ಮೂಲಕ, ಎಂ.ಎಸ್ ಧೋನಿಯವರ (MS Dhoni) 535 ಪಂದ್ಯಗಳ ದಾಖಲೆ ಮುರಿದಿದ್ದಾರೆ.
ವಿರಾಟ್ ಕೊಹ್ಲಿಯವರು ಒಟ್ಟು 536 ಪಂದ್ಯಗಳಲ್ಲಿ ಆಡಿದ್ದು ಇದರಲ್ಲಿ 295 ಏಕದಿನ ಪಂದ್ಯಾಟ, 115 ಟೆಸ್ಟ್ ಪಂದ್ಯಾಟ ಹಾಗೂ 125 ಟಿ20 ಪಂದ್ಯಾಟಗಳಿವೆ.
ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತೀಯರ ಪಟ್ಟಿ :
1) ಸಚಿನ್ ತೆಂಡೂಲ್ಕರ್ – ಒಟ್ಟು 664 ಪಂದ್ಯಗಳು (ನಿವೃತ್ತಿ)
2) ವಿರಾಟ್ ಕೊಹ್ಲಿ – ಒಟ್ಟು 536 ಪಂದ್ಯಗಳು
3) ಎಂ.ಎಸ್ ಧೋನಿ – ಒಟ್ಟು 535 ಪಂದ್ಯಗಳು (ನಿವೃತ್ತಿ)
4) ರಾಹುಲ್ ದ್ರಾವಿಡ್ – ಒಟ್ಟು 504 ಪಂದ್ಯಗಳು (ನಿವೃತ್ತಿ)
5) ರೋಹಿತ್ ಶರ್ಮಾ – ಒಟ್ಟು 486 ಪಂದ್ಯಗಳು
ವಿರಾಟ್ ಕೊಹ್ಲಿ ಟಿ20 ಮಾದರಿಯ ಕ್ರಿಕೆಟ್ ಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದುವರೆಗೂ 536 ಪಂದ್ಯಗಳ ಮೂಲಕ ಕೊಹ್ಲಿ (Virat Kohli) 27,041 ರನ್ ಗಳನ್ನು ಗಳಿಸಿದ್ದಾರೆ. ಈ ಮೇಲಿನ ಪಟ್ಟಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನ್ನೂ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದು, ಈ ವಿಭಾಗದಲ್ಲಿ ಇಬ್ಬರೂ ಮತ್ತಷ್ಟು ಸಾಧನೆಗಳನ್ನು ಮೆರೆಯಬಹುದು.