ಭಾರತ ಮತ್ತು ಬಾಂಗ್ಲಾದೇಶ ನಡುವೆ ಪ್ರಸಕ್ತ ವರ್ಷದ ಮೊದಲ ಟೆಸ್ಟ್ ಸರಣಿ (Ind vs Ban Test) ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂ ಚೆನ್ನೈನಲ್ಲಿ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಹಾಗೂ ಹಿಂಸಾಚಾರದ ನಡುವೆಯೂ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತಕ್ಕೆ ಪ್ರಯಾಣ ಬೆಳೆಸಿದ್ದು, ಅತಿಥೇಯ ಬಿಸಿಸಿಐ (BCCI) ಅತ್ಯಂತ ಹೆಚ್ಚು ಸುರಕ್ಷತೆಯೊಂದಿಗೆ ಟೆಸ್ಟ್ ಸರಣಿಯನ್ನು ನಡೆಸುತ್ತಿದೆ.
ಇಂದು ಬೆಳಿಗ್ಗೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾದೇಶ, ಭಾರತದ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಸಖತ್ ಪ್ಲಾನ್ ನಡೆಸಿತ್ತು. ಭಾರತದ ಪಾಳಯದಲ್ಲಿ ದಿಗ್ಗಜ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ಕಿಂಗ್ ಕೊಹ್ಲಿ, ಕೆಎಲ್ ರಾಹುಲ್ ಅವರಿದ್ದು, ಭಾರತ ಉತ್ತಮ ಮೊತ್ತ ಪೇರಿಸುವ ತವಕದಲಿತ್ತು. ಆದರೆ ನಡೆದದ್ದೇ ಬೇರೆ!!
Ind vs Ban Test: ಮತ್ತೊಮ್ಮೆ ಅಗ್ರಕ್ರಮಾಂಕದ ವೈಫಲ್ಯ
ಮೊದಲು ಬ್ಯಾಟಿಂಗಿಗಿಳಿದ ಭಾರತಕ್ಕೆ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ರೋಹಿತ್ ಶರ್ಮಾ (Rohit Sharma) ಕಣಕ್ಕಿಳಿದರೆ, ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿ, ಹಸನ್ ಮಹಮ್ಮದ್ ಅವರ ಇನ್ ಸ್ವಿಂಗ್ ದಾಳಿಗೆ ಬಲಿಯಾಗಿ ವಿಕೆಟ್ ಕೀಪರ್ ಲಿಟ್ಟನ್ ದಾಸ್ (Liton Das) ಅವರ ಕೈಗೆ ಕ್ಯಾಚಿತ್ತು ನಿರ್ಗಮಿಸಿದರೆ, ಮೊದಲ ಕ್ರಮಾಂಕದಲ್ಲಿ ಬಂದ ಶುಭ್ಮನ್ ಗಿಲ್ (Shubman Gill) ಕೇವಲ ಎಂಟು ಎಸೆತ ಎದುರಿಸಿ, ಅದೇ ಬೌಲರ್ಗೆ ವಿಕೆಟ್ ಒಪ್ಪಿಸಿದರು. ಅನಂತರ ಬಂದ ಕಿಂಗ್ ಕೊಹ್ಲಿ (Virat Kohli) ಕೂಡ 6 ರನ್ನುಗಳಿಗೆ ಔಟಾದಾಗ, ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತದ ಕನಸು ಕೈಬಿಟ್ಟಿತ್ತು.
ಆದರೆ, ಒಂದೆಡೆ ಆರಂಭಿಕ ಯಶಸ್ವಿ ಜೈಸ್ವಾಲ್ ನೆಲಕಚ್ಚಿ ನಿಂತು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರೆ, ರಿಷಭ್ ಪಂತ್ ಕೂಡ ಉತ್ತಮ ಮೊತ್ತ ಪೇರಿಸುವ ಭರವಸೆ ಮೂಡಿಸಿದರು. ಆದರೆ, 39 ರನ್ನುಗಳಿಗೆ ರಿಷಭ್ ಪಂತ್ ಕ್ಯಾಚಿತ್ತು ನಿರ್ಗಮಿಸಿದರೆ, ಜೈಸ್ವಾಲ್ ಕೂಡ 56 ರನ್ನುಗಳಿಗೆ ಔಟಾದರು. ಅನಂತರ ಬಂದ ರಾಹುಲ್ ಕೂಡ ತಾಳ್ಮೆಯ ಆಟವಾಡಿ ಭರವಸೆ ಮೂಡಿಸಿದರೂ, 16 ರನ್ನುಗಳಿಗೇ ಸ್ಪಿನ್ಗೆ ಬಲಿಯಾಗಿ ಪೆವಿಲಿಯನ್ ಸೇರಿದರು.
Ind vs Ban Test: ತಂಡಕ್ಕೆ ಆಸರೆಯಾದ ಆಲ್ರೌಂಡರ್ಗಳು
144 ರನ್ನುಗಳಿಗೆ ಅಗ್ರ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ನೆರವಾದದ್ದು ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ (Ravindra Jadeja) ಹಾಗೂ ರವಿಚಂದ್ರನ್ ಅಶ್ವಿನ್ (R Ashwin). ಇಬ್ಬರೂ ಮೊದಲಿಗೆ ತಾಳ್ಮೆಯ ಆಟವಾಡಿದರೂ, ಅನಂತರ ಬಾಂಗ್ಲಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು.
ಮೊದಲ ಟೆಸ್ಟ್ಗೆ (Ind vs Ban Test) ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗಿಳಿದ ರವಿಚಂದ್ರನ್ ಅಶ್ವಿನ್, ಆರಂಭದಿಂದಲೂ ಬಾಂಗ್ಲಾ ಬೌಲರ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು. ಏಕದಿನ ಮಾದರಿಯಂತೆ ಇನ್ನಿಂಗ್ಸ್ ಉದ್ದಕ್ಕೂ 100 ಸ್ಟ್ರೈಕ್ರೇಟ್ನಲ್ಲಿ ಆಟವಾಡಿದ ಅಶ್ವಿನ್, ಜೊತೆಗಾರ ರವೀಂದ್ರ ಜಡೇಜಾ ಅವರೊಂದಿಗೆ 195 ರನ್ನುಗಳ ಬೃಹತ್ ಜೊತೆಯಾಟ ನಡೆಸಿದ್ದಲ್ಲದೇ, ಕೇವಲ 108 ಎಸೆತಗಳಲ್ಲಿ ಅತಿವೇಗದ ಶತಕ ದಾಖಲಿಸಿ, ಭಾರತದ ಮೊತ್ತ 300 ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರವೀಂದ್ರ ಜಡೇಜಾ ಅವರೊಂದಿಗೆ ಅಶ್ವಿನ್ ಹೊಸ ಸಾಧನೆ
ಇದರೊಂದಿಗೆ ಅಶ್ವಿನ್ ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 1000 ರನ್ ಹಾಗೂ 100 ವಿಕೆಟ್ ಪಡೆದ ಕೇವಲ ಎರಡನೇ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಅಶ್ವಿನ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಬೇರಾರೂ ಅಲ್ಲ. ಇಂದು (Ind vs Ban Test) ಅಶ್ವಿನ್ ಗೆ ಜೊತೆಯಾಗಿ 86 ರನ್ ಗಳಿಸಿ ಕ್ರೀಸಿನಲ್ಲಿ ನಿಂತಿರುವ ರವೀಂದ್ರ ಜಡೇಜಾ.
ಜಡೇಜಾ ಕೂಡ ಫೋರ್ ಹಾಗೂ ಸಿಕ್ಸರ್ಗಳ ಸುರಿಮಳೆಯೊಂದಿಗೆ, 117 ಎಸೆತಗಳಲ್ಲಿ 87 ರನ್ ಗಳಿಸಿ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯರಾಗಿ ಉಳಿದಿದ್ದಾರೆ. ನಾಳೆಯ ಎರಡನೇ ದಿನದ ಮೊದಲ ಸೆಷನ್ನಲ್ಲಿ ಜಡೇಜಾ ಅವರು ಕೂಡ ಸೆಂಚುರಿ ಬಾರಿಸಿದರೆ, ಭಾರತದ ಪರವಾಗಿ ಇವರ ದಾಖಲೆಯ ಜೊತೆಯಾಟದ ಇತಿಹಾಸ ನಿರ್ಮಾಣವಾಗಲಿದೆ.
ಬಾಂಗ್ಲಾ ಪರ ಹಸನ್ ಮಹಮ್ಮದ್ ಬಿಗು ಬೌಲಿಂಗ್
ಇತ್ತ ಬಾಂಗ್ಲಾ (Ind vs Ban Test) ಪರ ಹಸನ್ ಮಹಮ್ಮದ್ ಮೊದಲ ನಾಲ್ಕು ವಿಕೆಟ್ ಕಿತ್ತು ತಂಡಕ್ಕೆ ಕೊಡುಗೆ ನೀಡಿದರೆ, ಉಳಿದೆಲ್ಲಾ ಬೌಲರ್ಗಳು ಅಷ್ಟಾಗಿ ಸಕ್ಸಸ್ ಪಡೆದಿಲ್ಲ. ಅದರಲ್ಲೂ ವಿಶೇಷವಾಗಿ ಬಾಂಗ್ಲಾದ ಸ್ಟಾರ್ ಆಲ್ರೌಂಡರ್ ಹಾಗೂ ಎಕನಾಮಿಕಲ್ ಬೌಲರ್ ಆಗಿರುವ ಶಕಿಬ್ ಅಲ್ ಹಸನ್ ಅವರು ಎಂಟು ಓವರ್ಗಳಿಗೆ 50 ರನ್ ಚಚ್ಚಿಸಿಕೊಂಡು ದುಬಾರಿಯಾಗಿದ್ದು, ಅವರನ್ನು ಅಶ್ವಿನ್ ಹಾಗೂ ಜಡೇಜಾ ಸಿಕ್ಸರ್ ಹಾಗೂ ಫೋರ್ಗಳ ಮೂಲಕ ಮನಬಂದಂತೆ ದಂಡಿಸಿದ್ದಾರೆ.
ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ತಂಡಕ್ಕೆ ಆಸರೆಯಾಗಿ ನಿಂತ ಆಲ್ರೌಂಡರ್ಗಳ ಸಹಾಯದಿಂದ ಗೌತಮ್ ಗಂಭೀರ್ ಅವರಿಂದ ಮೊದಲ ಬಾರಿಗೆ ಟೆಸ್ಟ್ ಕೋಚಿಂಗ್ ಪಡೆಯುತ್ತಿರುವ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸುವ ತವಕದಲ್ಲಿದೆ. ನಾಳೆಯ ಮೊದಲಾರ್ಧದಲ್ಲಿ ಪಿಚ್ ಯಾವ ರೀತಿ ವರ್ತಿಸಲಿದೆ ಹಾಗೂ ರವೀಂದ್ರ ಜಡೇಜಾ ಸೆಂಚುರಿ ಬಾರಿಸಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.