ನಿನ್ನೆಯಷ್ಟೇ ಖ್ಯಾತ ಬಾಂಗ್ಲಾದೇಶ ಆಲ್ರೌಂಡರ್ ಶಕಿಬ್ ಅಲ್ ಹಸನ್ (Shakib Al Hasan) ಅವರು ಟೆಸ್ಟ್ ಹಾಗೂ ಇತರ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸುವ ಸುಳಿವು ನೀಡಿದ ಬೆನ್ನಲ್ಲೇ, ಇದೀಗ ಮತ್ತೊಬ್ಬ ದಿಗ್ಗಜ ಆಲ್ರೌಂಡರ್ ಡ್ವೇಯ್ನ್ ಬ್ರಾವೊ (Dwayne Bravo) ಕೂಡ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಹೌದು. ವೆಸ್ಟ್ ಇಂಡೀಸ್ ತಂಡದಲ್ಲಿ ಮಧ್ಯಮ ವೇಗದ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿಯೂ ತಂಡಕ್ಕೆ ಹಲವು ಪಂದ್ಯಗಳಲ್ಲಿ ನೆರವಾಗಿ ಪಂದ್ಯಗಳನ್ನು ಗೆಲ್ಲಿಸಿದ್ದ ವೆಸ್ಟ್ ಇಂಡೀಸ್ನ ಈ ಖ್ಯಾತ ಕ್ರಿಕೆಟಿಗ, ಇದೀಗ ತನ್ನ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಇತ್ತೀಚೆಗೆ ಅಂತರಾಷ್ಟ್ರೀಯ ಅಥವಾ ಯಾವುದೇ ಲೀಗ್ಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಡ್ವೇಯ್ನ್ ಬ್ರಾವೊ (Dwayne Bravo), ಟ್ರಿಬಾಗೊ ನೈಟ್ ರೈಡರ್ಸ್ ತಂಡಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅದರಲ್ಲೂ ಐಪಿಎಲ್ನಲ್ಲಿ ಚೆನ್ನೈ ತಂಡದ ಬೌಲಿಂಗ್ ಕೋಚ್ ಆಗಿ ಆಗಿ ಕಾರ್ಯನಿರ್ವಹಿಸಿದ್ದಲ್ಲದೇ, ತನ್ನ ಸಕ್ರಿಯ ಕೆರಿಯರ್ನಲ್ಲಿ ವಿವಿಧ ಜವಾಬ್ದಾರಿಯಲ್ಲಿ ಚೆನ್ನೈಗೆ 3 ಕಪ್ ಗೆದ್ದುಕೊಟ್ಟಿದ್ದ ಬ್ರಾವೊ ಇದೀಗ ಅಧಿಕೃತವಾಗಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ನಿವೃತ್ತಿ ನೀಡುತ್ತಲೇ ಸಿಎಸ್ಕೆ ತೊರೆದು ಈ ತಂಡ ಸೇರಿದ ಬ್ರಾವೊ!
ಇದೇ ಸಂದರ್ಭದಲ್ಲಿ ಡ್ವೇಯ್ನ್ ಬ್ರಾವೊ ಅವರನ್ನು ಭಾರತದ ಐಪಿಎಲ್ ಫ್ರಾಂಚೈಸಿಯೊಂದು ತನ್ನ ಮೆಂಟರ್ ಆಗಿ ನೇಮಿಸಿಕೊಂಡಿದೆ. ಹೌದು. ಈಗಾಗಲೇ ಚೆನ್ನೈ ತಂಡದ ಬೌಲಿಂಗ್ ಕೋಚ್ ಆಗಿದ್ದ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ತನ್ನ ಮೆಂಟರ್ ಆಗಿ ನೇಮಿಸಿಕೊಂಡಿದೆ. ಈವರೆಗೆ ಮೆಂಟರ್ ಆಗಿದ್ದ ಗೌತಮ್ ಗಂಭೀರ್ (Gautam Gambhir) ಅವರು ರಾಷ್ಟ್ರೀಯ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ, ಅವರಿಂದ ತೆರವಾದ ಮೆಂಟರ್ ಸ್ಥಾನಕ್ಕೆ ಬ್ರಾವೊ (Dwayne Bravo) ನೇಮಕಗೊಂಡಿದ್ದಾರೆ. ಅವರೊಂದಿಗೆ ತಂಡದ ಮುಖ್ಯ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ಅವರೇ ಮುಂದುವರೆಯಲಿದ್ದು, ಸಹಾಯಕ ಕೋಚ್ ಆಗಿ ಭರತ್ ಅರುಣ್ (Bharat Arun) ಸೇರ್ಪಡೆಯಾಗಿದ್ದಾರೆ. ಈಗಾಗಲೇ ಅಫ್ಘಾನಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿರುವ ಬ್ರಾವೊ, ಕೋಚಿಂಗ್ ಹುದ್ದೆಯಲ್ಲಿ ಸಕ್ಸಸ್ ಕಂಡಿರುವುದೂ ಪ್ಲಸ್ ಪಾಯಿಂಟ್ ಆಗಲಿದೆ.
Dwayne Bravo: ಟಿ20 ಕ್ರಿಕೆಟ್ನಲ್ಲಿ ಬೆರಗಾಗಿಸುವ ಇವರ ಸಾಧನೆಗಳು!
ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಬಹಳ ಅಮೋಘ ಸಾಧನೆಗಳನ್ನು ಮಾಡಿರುವ ಬ್ರಾವೊ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವಿಕೆಟ್ ಕಿತ್ತವರ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ರಶೀದ್ ಖಾನ್ ಅವರಿಗಿಂತ 18 ವಿಕೆಟ್ಗಳಿಂದ ಮುಂದಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ 300, 400, 500 ಮತ್ತು 600 ವಿಕೆಟ್ ಕಿತ್ತ ಮೊದಲ ಕ್ರಿಕೆಟರ್ ಎನ್ನುವ ಸಾಧನೆಯಷ್ಟೇ ಅಲ್ಲದೇ, ಸಿಪಿಎಲ್ನಲ್ಲಿಯೂ ಅತಿ ಹೆಚ್ಚು ವಿಕೆಟ್ ಕಿತ್ತವರ ಯಾದಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಐಪಿಎಲ್ನಲ್ಲಿಯೂ ಕೂಡ ನಿವೃತ್ತಿಗೊಳ್ಳುವ ಮುಂಚೆ ಅತಿ ಹೆಚ್ಚು ವಿಕೆಟ್ ಕಿತ್ತವರ ಯಾದಿಯಲ್ಲಿ ಪ್ರಥಮ ಸ್ಥಾನಿಯಾಗಿದ್ದು, ಇವರ ನಿವೃತಿಯ ನಂತರ ಯಜುವೇಂದ್ರ ಚಹಲ್ (Yuzvedra Chahal) ಹಾಗೂ ಪಿಯೂಷ್ ಚಾವ್ಲಾ (Piyush Chawla) ಆ ಸ್ಥಾನವನ್ನು ಪಡೆದಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಇವರ ಸಾಧನೆಯಂತೂ ಅಮೋಘ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 5000 ರನ್ನುಗಳು, 300+ ವಿಕೆಟ್, 200 + ಕ್ಯಾಚ್ಗಳನ್ನು ಹಿಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬ್ರಾವೊ (Dwayne Bravo), ಟಿ20 ಜಗತ್ತಿಗಂತೂ ಸ್ಪೆಷಲಿಸ್ಟ್ ಆಗಿಯೇ ಮೆರೆದಿದ್ದಾರೆ. ಅಂತಿಮ ಓವರ್ಗಳಲ್ಲಿ ತನ್ನ ಸ್ಲೋವರ್ ಬಾಲ್ ಮೂಲಕ ವಿಕೆಟ್ ಕಿತ್ತು ತಂಡವನ್ನು ಗೆಲ್ಲಿಸುವ ತಾಕತ್ತಿರುವ ಬ್ರಾವೊ, ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಲ್ರೌಂಡರ್ ಆಗಿ ಹೆಸರು ಗಳಿಸಿ ನಿವೃತ್ತಿ ಹೊಂದಿದ್ದಾರೆ.
ಕೇವಲ ಕ್ರಿಕೆಟ್ ಅಲ್ಲದೇ, ಎಂಟರ್ಟೈನ್ಮೆಂಟ್ಗೂ ಅಷ್ಟೇ ಹೆಸರಾಗಿರುವ ಬ್ರಾವೊ, ತನ್ನ ಹಾಡುಗಳು ಹಾಗೂ ಡ್ಯಾನ್ಸ್ ಸ್ಟೆಪ್ಗಳ ಮೂಲಕ ಕ್ರಿಕೆಟ್ ಪ್ರಿಯರಲ್ಲಿ ಡಿಜೆ ಬ್ರಾವೊ ಅಂತಲೇ ಫೇಮಸ್ ಆಗಿದ್ದಾರೆ. ಟಿ20 ವರ್ಲ್ಡ್ ಕಪ್ ಹಾಗೂ ಐಪಿಎಲ್ನ ತನ್ನ ಪ್ರೈಮ್ ಟೈಂನಲ್ಲಿ ಚಾಂಪಿಯನ್, ಚಾಂಪಿಯನ್ ಹಾಡಿನ ಮೂಲಕ ಎಲ್ಲರಲ್ಲೂ ಮನೆಮಾತಾಗಿರುವ ಬ್ರಾವೊ, ಇದೀಗ ಐಪಿಎಲ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವುದು, ಅವರ ಕೆರಿಯರ್ಗೆ ಎಷ್ಟರಮಟ್ಟಿಗೆ ಸಕ್ಸಸ್ ನೀಡಲಿದೆ ಎಂದು ಕಾದುನೋಡಬೇಕಿದೆ.